ಕಾರವಾರ: ಆಶಾ ಕಾರ್ಯಕರ್ತೆಯರು ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಅವರ ನಿಸ್ವಾರ್ಥ ಸೇವೆಯಿಂದಲೇ ನೌಕಾಪಡೆ ಆಯೋಜಿಸಿದ ವೈದ್ಯಕೀಯ ಶಿಬಿರಗಳು ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಿದೆ ಎಂದು ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಅವರ ಪರವಾಗಿ ಕಮಾಂಡರ್ ಕೆ. ಅನಂತರಾಜ್ ಹೇಳಿದರು.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ, ಕಾರವಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಆಶಾ ಕಾರ್ಯಕರ್ತೆಯರನ್ನು ಕರ್ನಾಟಕ ನೌಕಾ ವಲಯದ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ನೌಕಾಪಡೆ ಆಯೋಜಿಸಿದ್ದ ಉಚಿತ ವೈದ್ಯಕೀಯ ಶಿಬಿರಗಳ ಯಶಸ್ಸಿನಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿತ್ತು. ಶಿಬಿರಗಳ ಕುರಿತು ಗ್ರಾಮೀಣ ಜನರಿಗೆ ಮಾಹಿತಿ ತಲುಪಿಸುವುದು, ಸಾರ್ವಜನಿಕರನ್ನು ಆರೋಗ್ಯ ತಪಾಸಣೆಗೆ ಪ್ರೇರೇಪಿಸುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ಅವರು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು.
ಇದರ ಪರಿಣಾಮ ಸಾವಿರಾರು ಜನರು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯ ಸೌಲಭ್ಯ ಪಡೆಯಲು ಸಾಧ್ಯವಾಯಿತು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಸ್ಮರಿಸಿ ನೌಕಾಪಡೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರವಾರ ವಲಯದ ಸಾರ್ವಜನಿಕರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಗೆ ಭಾರತೀಯ ನೌಕಾಪಡೆ ಬದ್ಧವಾಗಿದೆ ಎಂಬ ಸಂದೇಶವನ್ನೂ ಈ ಕಾರ್ಯಕ್ರಮ ಸಾರಿತು.