Friday, July 24, 2026
Join WhatsApp Group
HomeUncategorizedಮಧ್ಯರಾತ್ರಿ, ಕಾಡಿನ ರಸ್ತೆ, ಕೆಂಪು ಬಟ್ಟೆ!

ಮಧ್ಯರಾತ್ರಿ, ಕಾಡಿನ ರಸ್ತೆ, ಕೆಂಪು ಬಟ್ಟೆ!

ಯಲ್ಲಾಪುರ-ಶಿರಸಿ ನಡುವಿನ ಬೇಡ್ತಿ ಸೇತುವೆಯ ವೈರಲ್ ಕಥೆಯ ಹಿಂದಿನ ಸತ್ಯ | ʻಇದೇನ್‌ ತಿಕ್ಲು ಗುರೂʼ ಎಂದ ನೆಟ್ಟಿಗರು!

ಯಲ್ಲಾಪುರ: ಮಧ್ಯರಾತ್ರಿ. ಎರಡೂ ಬದಿಯಲ್ಲಿ ದಟ್ಟ ಕಾಡು. ರಸ್ತೆಯ ಮಧ್ಯೆ, ಸೇತುವೆಯ ಬಳಿ ಕೆಂಪು ಬಟ್ಟೆ ಹೊದ್ದ ವ್ಯಕ್ತಿಯೊಬ್ಬ ಕುಳಿತಿರುವ ದೃಶ್ಯ. ವೈರಲ್ ಪೋಸ್ಟ್‌ನಲ್ಲಿ ಮಧ್ಯರಾತ್ರಿ ಶಿರಸಿ–ಯಲ್ಲಾಪುರ ಕಾಡು ರಸ್ತೆಯಲ್ಲಿ ಕೆಂಪು ಬಟ್ಟೆ ಹೊದ್ದ ವ್ಯಕ್ತಿಯೊಬ್ಬ ರಸ್ತೆಯ ಮಧ್ಯೆ ಕುಳಿತಿದ್ದ. ಬೈಕ್‌ನಲ್ಲಿ ಬಂದ ಪ್ರೀತಂ ಎಂಬ ಫೋಟೋಗ್ರಾಫರ್‌ ಹಾಗೂ ಇತರ ಯುವಕರು ನಿಲ್ಲಲು ಮುಂದಾದಾಗ, ಅಲ್ಲಿ ಕುಳಿತಿದ್ದ ವ್ಯಕ್ತಿ ಸಡನ್‌ ಆಗಿ ಮುಖ ತಿರುಗಿಸಿ ಇವರತ್ತ ನೋಡಿದ್ದಾನೆ, ಯುವಕರು ಭಯದಿಂದ ಬೈಕ್‌ ವೇಗ ಹೆಚ್ಚಿಸಿ ಯಲ್ಲಾಪುರ ತಲುಪಿದ್ದಾರಂತೆ.

ಯಲ್ಲಾಪುರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಈ ಘಟನೆ ಬಗ್ಗೆ ತಿಳಿಸಿದಾಗ, ಅವರು “ರಾತ್ರಿ ಹೊತ್ತಿನಲ್ಲಿ ಈ ಪ್ರದೇಶದಲ್ಲಿ ಹೆಚ್ಚು ಹೊತ್ತು ನಿಲ್ಲಬೇಡಿ. ಅದು ಅಪಾಯಕಾರಿ ಪ್ರದೇಶ” ಎಂದು ಎಚ್ಚರಿಕೆ ನೀಡಿದ್ದಾರಂತೆ.

ಅವರು ಬೈಕ್‌ ಓಡಿಸಿದ ವೇಗದಲ್ಲಿಯೇ ನಮ್ಮ ಮೆದುಳು ಕೂಡ ಕೆಲಸ ಮಾಡಬೇಕು! ಏಕೆಂದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಇಂತಹ ಪೋಸ್ಟ್‌ ಒಂದು ಶಿರಸಿ–ಯಲ್ಲಾಪುರ ಭಾಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. “ಪೊಲೀಸರ ಎಚ್ಚರಿಕೆಯಿಂದ ಯುವಕರು ಬಚಾವಾದರು” ಎಂಬ ಕಥೆಯೊಂದಿಗೆ ಈ ಪೋಸ್ಟ್ ಹರಿದಾಡುತ್ತಿದೆ.

ಆದರೆ ಈ ಕಥೆಯಲ್ಲಿ ಎಷ್ಟು ಸತ್ಯವಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು ʻಕೆನರಾ ನೆಕ್ಸ್ಟ್ʼ ನಡೆಸಿದೆ. ಯಲ್ಲಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಬೇರೆ ಚಿತ್ರಣವೇ ಹೊರಬಂದಿದೆ. ಘಟನೆಯ ಬಗ್ಗೆ ಸ್ಥಳೀಯರ ಅಭಿಪ್ರಾಯಗಳನ್ನು ಅಲ್ಲಿ ಬಂದ ಕಮೆಂಟ್‌ಗಳೇ ಹೇಳಿಬಿಡುತ್ತವೆ!

ಪೊಲೀಸ್ ಅಧಿಕಾರಿಗಳು, “ಇಂತಹ ಯಾವುದೇ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ. ಠಾಣೆಯಲ್ಲಿ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಬಹುಶಃ ಯಾರಾದರೂ ಬೀಟ್ ಸಿಬ್ಬಂದಿಗೆ ವಿಷಯ ಹೇಳಿರಬಹುದು. ಆಗ ಅವರು ರಾತ್ರಿ ಹೊತ್ತು ಕಾಡಿನ ಅಥವಾ ನಿರ್ಜನ ರಸ್ತೆಯಲ್ಲಿ ವಾಹನ ನಿಲ್ಲಿಸಬೇಡಿ ಎಂದು ಸಾಮಾನ್ಯ ಮುನ್ನೆಚ್ಚರಿಕೆಯ ಸಲಹೆ ನೀಡಿರಬಹುದು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನಾವು ಇಂತಹ ಸಲಹೆಗಳನ್ನು ನೀಡುತ್ತೇವೆ. ಇದರಲ್ಲೇನೂ ವಿಶೇಷವಿಲ್ಲ. ಆದರೆ ವೈರಲ್ ಪೋಸ್ಟ್‌ನಲ್ಲಿ ಹೇಳಿರುವ ಘಟನೆಯ ಬಗ್ಗೆ ನಮ್ಮ ಬಳಿ ಯಾವುದೇ ಅಧಿಕೃತ ಮಾಹಿತಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಸೋಷಿಯಲ್‌ ಮೀಡಿಯಾ ಪ್ರಪಂಚವೇ ಹಾಗೆ. ಸುಮ್ಮನೇ ಒಂದಿಷ್ಟು ಹುರುಳಿಲ್ಲದ ಪೋಸ್ಟ್‌ಗಳನ್ನು ಹರಿಬಿಡುವುದು ಸಾಮಾನ್ಯ. ನೋಡುವವರು ಇದ್ದೇ ಇರುತ್ತಾರೆ ನೋಡಿ! ಪೊಲೀಸರು ಹೇಳಿರುವ ಒಂದು ಮಾತು ಮಾತ್ರ ಎಲ್ಲರೂ ನೆನಪಿಡಬೇಕಾದದ್ದು. ರಾತ್ರಿ ಹೊತ್ತು ಕಾಡಿನ ಅಥವಾ ನಿರ್ಜನ ರಸ್ತೆಯಲ್ಲಿ ಅಪರಿಚಿತರಿಗಾಗಿ ವಾಹನ ನಿಲ್ಲಿಸದಿರುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯ ಅಭ್ಯಾಸ. ಆದರೆ ಅದನ್ನು ಆಧಾರವಾಗಿಟ್ಟುಕೊಂಡು ಭಯ ಹುಟ್ಟಿಸುವ ಕಥೆಗಳನ್ನು ಕಟ್ಟುವುದು ಅಥವಾ ಪ್ರತಿಯೊಂದು ದೃಶ್ಯಕ್ಕೂ ರಹಸ್ಯದ ಬಣ್ಣ ಬಳಿಯುವುದು ಬೇರೆ ವಿಷಯ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್‌ಗಳು ಕೆಲವೇ ನಿಮಿಷಗಳಲ್ಲಿ ಸಾವಿರಾರು ಜನರನ್ನು ತಲುಪುತ್ತವೆ. “ಭೂತ”, “ಮರ್ಮ”, “ಕೆಂಪು ಬಟ್ಟೆ”, “ಮಧ್ಯರಾತ್ರಿ”, “ಕಾಡು ರಸ್ತೆ” ಎಂಬ ಪದಗಳು ಸೇರಿದರೆ ಪೋಸ್ಟ್ ಇನ್ನೂ ವೇಗವಾಗಿ ವೈರಲ್ ಆಗುತ್ತದೆ. ಆದರೆ ವೈರಲ್ ಆಗುವುದು ಮತ್ತು ಸತ್ಯವಾಗುವುದು ಎರಡೂ ಒಂದೇ ಅಲ್ಲ ಎಂಬುದನ್ನು ಮರೆಯಬಾರದು.

ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಪ್ರತಿಯೊಂದು ಪೋಸ್ಟ್‌ನ್ನೂ ತಕ್ಷಣ ನಂಬುವ ಬದಲು, ಅದರ ಸತ್ಯಾಸತ್ಯತೆ ಪರಿಶೀಲಿಸುವುದು ಅಗತ್ಯ. ಕಾಡಿನ ರಸ್ತೆಯಲ್ಲಿ ರಾತ್ರಿ ಪ್ರಯಾಣಿಸುವಾಗ ಎಚ್ಚರಿಕೆಯಿಂದಿರುವುದು ಒಳ್ಳೆಯದು.

ಸೋಷಿಯಲ್‌ ಮೀಡಿಯಾಗಳ ಉದ್ದೇಶ ಒಳ್ಳೆಯದೇ ಇದೆ. ನಾವು ಬಳಸುತ್ತಿರುವ ರೀತಿ ಸರಿಯಿಲ್ಲ ಅಷ್ಟೇ. ಒಳ್ಳೆಯದನ್ನು ಹಂಚಿ. ಸುಳ್ಳನ್ನಲ್ಲ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share