Monday, September 7, 2026
Join WhatsApp Group
HomeLocal Newsಪಿಡಿಒ ಉತ್ತರಕ್ಕೆ ಅರಣ್ಯವಾಸಿಗಳು ಗರಂ!

ಪಿಡಿಒ ಉತ್ತರಕ್ಕೆ ಅರಣ್ಯವಾಸಿಗಳು ಗರಂ!

ಸಿದ್ದಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕೃತಗೊಂಡ ಅರ್ಜಿದಾರರ ಸಾಗುವಳಿ ಕ್ಷೇತ್ರಗಳ ಮಹಜರ್ ಪ್ರಕ್ರಿಯೆಯಲ್ಲಿ ಗಂಭೀರ ನ್ಯೂನ್ಯತೆಗಳಿವೆ ಎಂದು ಆರೋಪಿಸಿ ವಾಜಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯವಾಸಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರನ್ನು ಭೇಟಿ ಮಾಡಿ ಸ್ಪಷ್ಟನೆ ಕೇಳಿದ ವೇಳೆ ಅಸಮಾಧಾನ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಅರಣ್ಯವಾಸಿಗಳ ತಂಡ ಮಂಗಳವಾರ ವಾಜಗೋಡ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ, ಮಹಜರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿತು. ಈ ವೇಳೆ ಪಿಡಿಒ ಗೌರೀಶ್ ಹೆಗಡೆ ಅವರು “ನಾನು ಹೋಗಿಲ್ಲ, ನೋಡಿಲ್ಲ, ಮಾಡಿಲ್ಲ, ಗೊತ್ತಿಲ್ಲ, ಆದೇಶದ ಪ್ರತಿ ನನ್ನ ಬಳಿ ಇಲ್ಲ” ಎಂಬ ರೀತಿಯ ಅಸ್ಪಷ್ಟ ಉತ್ತರಗಳನ್ನು ನೀಡಿದ್ದಾರೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ಆರೋಪಿಸಿದೆ.

ಮಹಜರ್ ಪ್ರಕ್ರಿಯೆಯಲ್ಲಿ ಕಂಡುಬಂದಿರುವ ನ್ಯೂನ್ಯತೆಗಳ ಕುರಿತು ದಾಖಲೆಗಳ ಸಮೇತ ಅರಣ್ಯವಾಸಿಗಳು ಪ್ರಶ್ನೆಗಳನ್ನು ಮುಂದಿಟ್ಟರೂ ಸಮರ್ಪಕ ಉತ್ತರ ಸಿಗಲಿಲ್ಲ. ಇದರಿಂದ ಸಭೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಭೆಯಲ್ಲಿ ಹಾಜರಿದ್ದ ಪಿಎಸ್‌ಐ ನಾಗಪ್ಪ ಭೋವಿ ಮಧ್ಯಸ್ಥಿಕೆ ವಹಿಸಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದರು. ಅವರ ಮಧ್ಯಸ್ಥಿಕೆಯಿಂದ ಸಭೆಯ ವಾತಾವರಣ ತಿಳಿಗೊಂಡಿತು.

ಸಭೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಪ್ರತಿಭಾ ಮರಾಠಿ ಉಪಸ್ಥಿತರಿದ್ದರು. ಹೋರಾಟಗಾರರ ವೇದಿಕೆಯ ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಬಾಲಚಂದ್ರ ನಾಯ್ಕ, ಮಂಜುನಾಥ ಈರ ನಾಯ್ಕ, ಶಂಕರ ನಾರಾಯಣ ಹೆಗಡೆ ದಾನಮಾವ ಸೇರಿದಂತೆ ಹಲವರು ಚರ್ಚೆಯಲ್ಲಿ ಭಾಗವಹಿಸಿದರು.

525 ಅರ್ಜಿಗಳ ಪೈಕಿ 284 ತಿರಸ್ಕೃತ

ವಾಜಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಗ್ರಾಮಗಳಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಒಟ್ಟು 525 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 284 ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಅರ್ಜಿಗಳಿಗೆ ಸಂಬಂಧಿಸಿದ ಮಹಜರ್ ಪ್ರಕ್ರಿಯೆ ನಡೆಸಬೇಕಿದೆ ಎಂದು ಪಿಡಿಒ ಮಾಹಿತಿ ನೀಡಿದರು.

ಆದೇಶ ಉಲ್ಲಂಘನೆ ಆರೋಪ

ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆ ಉಸ್ತುವಾರಿ ಸಮಿತಿಯ ನಿರ್ದೇಶನದಂತೆ, ದಾಖಲಾತಿಗಳ ಕೊರತೆಯಿಂದ ತಿರಸ್ಕೃತಗೊಂಡ ಅರ್ಜಿಗಳ ಮರುಪರಿಶೀಲನೆ ವೇಳೆ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ಪರಿಶಿಷ್ಟ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರನ್ನು ಒಳಗೊಂಡ ತಂಡದ ಮೂಲಕ ಮಹಜರ್ ನಡೆಸಬೇಕು. ಆದರೆ ಈ ಆದೇಶ ಪಾಲನೆಯಾಗಿಲ್ಲ ಎಂಬ ಆರೋಪವನ್ನು ಹೋರಾಟಗಾರರ ವೇದಿಕೆ ಮಾಡಿದೆ.

ಸಭೆಯಲ್ಲಿ ರವೀಂದ್ರ ನಾಯ್ಕ, ರಾಮಚಂದ್ರ ತ್ಯಾಗಲಿಮನೆ, ನಾರಾಯಣ ರಾಮ ನಾಯ್ಕ ಸೇರಿದಂತೆ ಹಲವು ಅರಣ್ಯವಾಸಿಗಳು ಮಾತನಾಡಿದರು. ಸುಧಾಕರ ಮಡಿವಾಳ, ಸಂಕೇತ ಹಲಗೇರಿ, ಆರ್.ಟಿ. ನಾಯ್ಕ, ಮೋಹನ್, ನಾರಾಯಣ ಗಾಳಿಮನೆ, ಎಂ.ಪಿ. ಗೌಡ, ಗೋದಾವರಿ ನಾಯ್ಕ, ಜಗದೀಶ ಶಿರಳಗಿ, ಬಿ.ಡಿ. ನಾಯ್ಕ, ಮಂಜುನಾಥ ಕಿಲಾರ, ಗಣಪತಿ ಶಂಕರ್ ಗೌಡ, ತಿಮ್ಮಪ್ಪ ನಾಯ್ಕ, ಕೃಷ್ಣಮೂರ್ತಿ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share