ಹಳಿಯಾಳ: ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದ ನಾಡಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 22ರಂದು ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ವಸಂತ ಅಲಿಯಾಸ್ ವಾಸು ರಾಯಪ್ಪ ಕೊರವರ ಎಂಬಾತ ತನ್ನ ಮನೆಯಲ್ಲಿ ಸ್ಪೋಟಕ ವಸ್ತುಗಳು ಹಾಗೂ ನಾಡಬಾಂಬ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ. ಬೆಳಗಿನ ಜಾವ 5.10ರ ಸುಮಾರಿಗೆ ಅವು ಸ್ಫೋಟಗೊಂಡ ಪರಿಣಾಮ ಆರೋಪಿಯ ಮನೆ, ಮನೆಯ ಮೇಲ್ಛಾವಣಿ, ಅಡುಗೆಮನೆಯ ಕಿಟಕಿಯ ಗಾಜುಗಳು ಹಾಗೂ ಸುತ್ತಮುತ್ತಲಿನ ಮನೆಗಳ ಹಂಚು ಮತ್ತು ಬಾಗಿಲುಗಳಿಗೆ ಹಾನಿಯಾಗಿದ್ದು, ಸುಮಾರು ₹1.15 ಲಕ್ಷ ಮೌಲ್ಯದ ಆಸ್ತಿ ನಷ್ಟ ಸಂಭವಿಸಿತ್ತು.
ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ದಾಂಡೇಲಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ, ಹಳಿಯಾಳ ಸಿಪಿಐ ಜಯಪಾಲ ಪಾಟೀಲ ನೇತೃತ್ವದಲ್ಲಿ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.
ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತಂಡವು ಜೂನ್ 24ರಂದು ಹುಬ್ಬಳ್ಳಿಯ ತಾರಿಹಾಳ ಗ್ರಾಮದ ಬಸ್ ನಿಲ್ದಾಣದ ಸಮೀಪ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ. ಬಳಿಕ ಆರೋಪಿಯನ್ನು ಹಳಿಯಾಳದ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಕಿರಣ ಪಾಟೀಲ, ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐ ಕುಷ್ಟಗೌಡ ಅರಕೇರಿ, ರಾಮನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ ನಾಯಕ, ರಾಮನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮೊಹಮ್ಮದ್ ಶಫಿ ಶೇಖ್, ದಾಂಡೇಲಿ ನಗರ ಠಾಣೆಯ ಸಿಬ್ಬಂದಿಗಳಾದ ಎಂ.ಎಂ. ಮುಲ್ಲಾ, ಕೃಷ್ಣ ಬಿಳಿವರಿ, ಬಸವರಾಜ ತೆಲಸಂಗ, ಹಳಿಯಾಳ ಠಾಣೆಯ ಸಿಬ್ಬಂದಿಗಳಾದ ಬಸವರಾಜ ತ್ಯಾಪಿ, ಶ್ರೀಶೈಲ, ಬಸವರಾಜ ಹಗರಿ, ಮಲ್ಲಿಕಾರ್ಜುನ ಕುದರಿ, ವಿನೋದ, ಲಕ್ಷಣ, ಅರವಿಂದ, ಮಂಜುನಾಥ, ವೃತ್ತ ಕಚೇರಿ ಸಿಬ್ಬಂದಿ ನಿಂಗಪ್ಪ ಹಾಗೂ ತಾಂತ್ರಿಕ ಸಹಾಯ ಸಿಬ್ಬಂದಿಗಳಾದ ಉದಯ ಗುನಗಾ (ಡಿಪಿಒ) ಮತ್ತು ಚಂದ್ರು ಪಾಟೀಲ (ದಾಂಡೇಲಿ ನಗರ) ಕಾರ್ಯಾಚರಣೆಯಲ್ಲಿದ್ದರು.
ಪ್ರಕರಣದ ತನಿಖೆ ಮುಂದುವರಿದಿದ್ದು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದಿಸಿದ್ದಾರೆ.