ಶಿರಸಿ: ಗಡಿಪಾರು ಆದೇಶ ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ರೌಡಿ ಆಸಾಮಿಯನ್ನು ಬನವಾಸಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬದನಗೋಡ ಗ್ರಾಮದ ನಿವಾಸಿ ಸ್ವಾಮೇಲಾ @ ಸುನೀಲ್ ಚಂದ್ರಪ್ಪ ಭೋವಿವಡ್ಡರ (24) ವಿರುದ್ಧ 2024 ಮತ್ತು 2025ನೇ ಸಾಲಿನಲ್ಲಿ ಒಟ್ಟು ಆರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರಿಂದ ಆತನ ಮೇಲೆ ರೌಡಿ ಶೀಟ್ ತೆರೆಯಲಾಗಿತ್ತು. ಆದರೂ ರೌಡಿ ಚಟುವಟಿಕೆ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಗಡಿಪಾರು ಕ್ರಮ ಕೈಗೊಳ್ಳಲಾಗಿತ್ತು.
ಶಿರಸಿ ಉಪವಿಭಾಗಾಧಿಕಾರಿಗಳ ಆದೇಶದಂತೆ ಮಾರ್ಚ್ 17ರಂದು ಆರೋಪಿಯನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಆದರೆ ಆತ ಯಾದಗಿರಿ ನಗರ ಪೊಲೀಸ್ ಠಾಣೆಗೆ ಒಂದು ದಿನ ಮಾತ್ರ ಹಾಜರಾಗಿ ಬಳಿಕ ನಾಪತ್ತೆಯಾಗಿದ್ದ. ಇದರಿಂದ ಗಡಿಪಾರು ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹುಡುಕಾಟ ಆರಂಭಿಸಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್‌ಪಿ ಗೀತಾ ಪಾಟೀಲ ಹಾಗೂ ಸಿಪಿಐ ಸಂಪತ್ ಇ.ಸಿ. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಹಾಂತಪ್ಪ ಜಿ. ಕುಂಬಾರ ಮತ್ತು ಪಿಎಸ್‌ಐ ರವೀಂದ್ರ ಬಿರಾದಾರ ನೇತೃತ್ವದ ತಂಡದಲ್ಲಿ ಸಿಎಚ್‌ಸಿ ಕುಮಾರ ಬಣಕಾರ, ಸಿಪಿಸಿ ಜಗದೀಶ ಕೆ., ರಾಜೇಶ್ ಪಿ.ಎಂ., ಬಸವರಾಜ ಜಾಡರ ಹಾಗೂ ಮಂಜಪ್ಪ ಪಿ. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಜೂನ್ 23ರಂದು ದಾಸನಕೊಪ್ಪ ಕೆಇಬಿ ಗ್ರಿಡ್ ಸಮೀಪ ಆರೋಪಿ ಇರುವ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.