ಅಂಕೋಲಾ: ಭಾರೀ ಮಳೆ ಮತ್ತು ಬಿರುಗಾಳಿಯ ಅಬ್ಬರಕ್ಕೆ ಬೃಹತ್ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಗೆ ಭಾರೀ ಹಾನಿಯಾಗಿದ್ದು, ಮನೆಯೊಳಗಿದ್ದ ಕುಟುಂಬದವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಅಂಕೋಲಾ ತಾಲೂಕಿನ ಕಾಳೇಶ್ವರ ಗ್ರಾಮದಲ್ಲಿ ನಡೆದಿದೆ.
ದಯಾನಂದ ಶಂಕರ ಭಂಡಾರಿ ಅವರಿಗೆ ಸೇರಿದ ಮನೆಯ ಮೇಲೆ ಬೃಹತ್ ಮರ ಉರುಳಿ ಬಿದ್ದಿದ್ದು, ಮನೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ. ಅಲ್ಲದೆ ಮನೆಯೊಳಗಿದ್ದ ಪೀಠೋಪಕರಣಗಳು ಹಾಗೂ ಇತರೆ ಗೃಹೋಪಯೋಗಿ ವಸ್ತುಗಳಿಗೂ ಹಾನಿಯಾಗಿದೆ.
ಕುಟುಂಬದವರ ಮಾಹಿತಿ ಪ್ರಕಾರ, ಘಟನೆ ಸಂಭವಿಸುವ ಕೆಲ ಕ್ಷಣಗಳ ಮೊದಲು ಎಲ್ಲರೂ ರಾತ್ರಿ ಊಟಕ್ಕೆ ಕುಳಿತುಕೊಳ್ಳಲು ಸಿದ್ಧತೆ ನಡೆಸುತ್ತಿದ್ದರು. ಅಷ್ಟರಲ್ಲೇ ಭಾರೀ ಶಬ್ದದೊಂದಿಗೆ ಮರ ಮನೆ ಮೇಲೆ ಬಿದ್ದಿದೆ. ಮೇಲ್ಛಾವಣಿಯ ಒಂದು ಭಾಗ ಅವರು ಕುಳಿತಿದ್ದ ಸ್ಥಳದಿಂದ ಕೆಲವೇ ಅಡಿ ದೂರದಲ್ಲಿ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು. ಬಳಿಕ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಕುಟುಂಬಕ್ಕೆ ಭರವಸೆ ನೀಡಿದ್ದಾರೆ.