‘ತಪ್ಪು ಮಾಹಿತಿ ನೀಡಿ ವಿವಾದ ಸೃಷ್ಟಿಸುವ ಪ್ರಯತ್ನ’ : ರಾಮು ನಾಯ್ಕ ಆರೋಪ
ಯಲ್ಲಾಪುರ: ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕುಂಕುಮಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ತಪ್ಪು ಮಾಹಿತಿಯಿಂದ ಕೂಡಿದ್ದು, ಅನಗತ್ಯ ವಿವಾದ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಬಿಜೆಪಿ ಕಾರ್ಯಕರ್ತ ರಾಮು ನಾಯ್ಕ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತದಲ್ಲಿ ಹಿಂದೂಗಳು ಬಳಸುವ ಕುಂಕುಮವನ್ನು “90 ಪ್ರತಿಶತ ಇಸ್ಲಾಮಿಕ್ ರಾಷ್ಟ್ರಗಳಿಂದ ಬರುತ್ತದೆ” ಎಂದು ಹೇಳಿರುವುದು ವಾಸ್ತವಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ.
ಸಚಿವರು ಉಲ್ಲೇಖಿಸಿರುವುದು ಕುಂಕುಮವಲ್ಲ, ಅಡುಗೆ ಹಾಗೂ ಸುಗಂಧಕ್ಕಾಗಿ ಬಳಸುವ ಕೇಸರಿ (Saffron) ಆಗಿದ್ದು, ಅದನ್ನು ಕೆಲವು ಪ್ರಮಾಣದಲ್ಲಿ ಇರಾನ್ ಸೇರಿದಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಹಣೆಗೆ ಹಚ್ಚಿಕೊಳ್ಳುವ ಕುಂಕುಮ ಅಥವಾ ಕೇಸರಿ ಬಣ್ಣವನ್ನು ಅಲ್ಲಿಂದ ಆಮದು ಮಾಡಿಕೊಳ್ಳುವುದಿಲ್ಲ.
ಭಾರತದಲ್ಲಿ ಅರಿಶಿಣ, ಸುಣ್ಣ, ಅಲಂ, ಲಿಂಬೆರಸ ಸೇರಿದಂತೆ ವಿವಿಧ ಪದಾರ್ಥಗಳನ್ನು ಬಳಸಿ ಕುಂಕುಮವನ್ನು ತಯಾರಿಸಲಾಗುತ್ತದೆ. ಹೀಗಾಗಿ ಕುಂಕುಮ ಮತ್ತು ಕೇಶರ ಎರಡನ್ನೂ ಒಂದೇ ಎಂದು ಬಿಂಬಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗೃಹ ಇಲಾಖೆಯಂತಹ ಮಹತ್ವದ ಹೊಣೆಗಾರಿಕೆ ಹೊಂದಿರುವ ಸಚಿವರು ಸಾರ್ವಜನಿಕವಾಗಿ ಮಾತನಾಡುವಾಗ ವಿಷಯದ ಬಗ್ಗೆ ಸಮಗ್ರ ಮಾಹಿತಿ ಹೊಂದಿರಬೇಕು. ಅವರ ಹೇಳಿಕೆಗಳಿಗೆ ಜವಾಬ್ದಾರಿಯೂ ಇರಬೇಕು.
ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಕಾರ್ಯವೈಖರಿಯನ್ನು ಉಲ್ಲೇಖಿಸಿದ ರಾಮು ನಾಯ್ಕ, ಉನ್ನತ ಹುದ್ದೆಯಲ್ಲಿದ್ದಾಗ ಏನು ಮಾತನಾಡಬೇಕು, ಎಷ್ಟು ಮಾತನಾಡಬೇಕು ಎಂಬ ಪ್ರಜ್ಞೆ ಅವರಿಗೆ ಇತ್ತು. ಆದರೆ ಈಗಿನ ಗೃಹ ಸಚಿವರು ಚಿತ್ತಾಪುರ ಗಲಭೆ, ಆರ್‌ಎಸ್‌ಎಸ್ ನೋಂದಣಿ, ಮತದಾರರ ಪಟ್ಟಿ ಪರಿಷ್ಕರಣೆ, ಇ-20 ಪೆಟ್ರೋಲ್ ಹಾಗೂ ಕುಂಕುಮ ವಿವಾದ ಸೇರಿದಂತೆ ಹಲವು ವಿಷಯಗಳಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಕಾರಣವಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.