“ಈ ವ್ಯಕ್ತಿ ಯಾವಾಗಲೂ ಮುಖಕ್ಕೆ ವಿಚಿತ್ರವಾದ ಕಪ್ಪು ಮಾಸ್ಕ್ ಯಾಕೆ ಹಾಕಿಕೊಂಡಿರುತ್ತಾರೆ?” ಮೊದಲ ಬಾರಿ ಅವರ ಫೋಟೋ ನೋಡಿದ ಬಹುತೇಕ ಜನರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಇದೇ. ಕೆಲವರಿಗೆ ಅವರು ಸಿನಿಮಾದ ಸೂಪರ್ ಹೀರೋನಂತೆ ಕಾಣುತ್ತಾರೆ. ಇನ್ನೂ ಕೆಲವರಿಗೆ ರಹಸ್ಯ ಕಾರ್ಯಾಚರಣೆಯ ಕಮಾಂಡೋ ಅನಿಸುತ್ತಾರೆ. ಆದರೆ ಆ ಮಾಸ್ಕ್ ಹಿಂದೆ ಅಡಗಿರುವ ಸತ್ಯ ಗೊತ್ತಾದರೆ, ಕಣ್ಣುಗಳು ತೇವವಾಗುತ್ತವೆ…ಅವರ ಹೆಸರು ಲೆಫ್ಟಿನೆಂಟ್ ಕರ್ನಲ್ ರಿಷಿ ರಾಜಲಕ್ಷ್ಮಿ ನಾಯರ್.
ಆದರೆ ದೇಶದಾದ್ಯಂತ ಅವರು ಪ್ರಸಿದ್ಧರಾಗಿರುವುದು “ಭಾರತೀಯ ಸೇನೆಯ ಮಾಸ್ಕ್ ಮ್ಯಾನ್” ಎಂಬ ಹೆಸರಿನಿಂದ.ಕಾಶ್ಮೀರದ ಪುಲ್ವಾಮಾ. ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿತ್ತು. ಗುಂಡಿನ ಚಕಮಕಿಯ ಮಧ್ಯೆ ರಿಷಿ ನಾಯರ್ ತಮ್ಮ ತಂಡವನ್ನು ಮುನ್ನಡೆಸುತ್ತಿದ್ದರು. ಅದೇ ವೇಳೆ ಉಗ್ರರು ಹಾರಿಸಿದ ಗುಂಡುಗಳು ಅವರ ಮುಖಕ್ಕೆ ತಗುಲಿದವು. ಮೂಗು, ದವಡೆ, ಮುಖದ ಮೂಳೆಗಳು ಭೀಕರವಾಗಿ ಜಖಂಗೊಂಡವು.
ಸಾಮಾನ್ಯ ಮನುಷ್ಯನಾಗಿದ್ದರೆ ಅಲ್ಲಿಯೇ ಕುಸಿದು ಬೀಳುತ್ತಿದ್ದ. ಆದರೆ ಈ ಯೋಧ ಮಾತ್ರ ಗಾಯದ ನೋವನ್ನೇ ಮರೆತು ಕಾರ್ಯಾಚರಣೆ ಮುಂದುವರಿಸಿ ತನ್ನ ತಂಡವನ್ನು ಸುರಕ್ಷಿತವಾಗಿ ಯಶಸ್ಸಿನತ್ತ ಕೊಂಡೊಯ್ದ.ಆ ಒಂದು ಕಾರ್ಯಾಚರಣೆ ಅವರ ಮುಖವನ್ನು ಕಿತ್ತುಕೊಂಡಿತು. ಆದರೆ ಅವರ ಧೈರ್ಯವನ್ನಲ್ಲ.ನಂತರ ಆರಂಭವಾಯಿತು ಮತ್ತೊಂದು ಯುದ್ಧ. ಅದು ಆಸ್ಪತ್ರೆಯ ಯುದ್ಧ.
ಒಂದಲ್ಲ, ಎರಡಲ್ಲ… ಸುಮಾರು 28ಕ್ಕೂ ಹೆಚ್ಚು ಮರುಶಸ್ತ್ರಚಿಕಿತ್ಸೆಗಳು. ತಿಂಗಳುಗಟ್ಟಲೆ ಚಿಕಿತ್ಸೆ. ಅಸಹನೀಯ ನೋವು. ಕನ್ನಡಿಯ ಮುಂದೆ ನಿಂತಾಗ ಹಿಂದಿನ ಮುಖ ಕಾಣುವುದಿಲ್ಲ. ಆದರೂ ಅವರು ಕುಗ್ಗಲಿಲ್ಲ.ಮುಖದ ರಕ್ಷಣೆಗೆ ವೈದ್ಯರು ವಿಶೇಷ ಮಾಸ್ಕ್ ಬಳಸುವಂತೆ ಸಲಹೆ ನೀಡಿದರು. ಆ ಮಾಸ್ಕ್ ಧರಿಸಿಕೊಂಡೇ ಅವರು ಮತ್ತೆ ಭಾರತೀಯ ಸೇನೆಗೆ ಮರಳಿದರು. ಆಗಿನಿಂದಲೇ ದೇಶದ ಜನ ಅವರಿಗೆ “ದಿ ಮಾಸ್ಕ್ ಮ್ಯಾನ್ ಆಫ್ ಇಂಡಿಯನ್ ಆರ್ಮಿ” ಎಂದು ಕರೆಯತೊಡಗಿದರು.
ಮತ್ತೆ ಸಮವಸ್ತ್ರ ಧರಿಸಿದರು. ಮತ್ತೆ ಸೈನಿಕರಿಗೆ ತರಬೇತಿ ನೀಡಿದರು. ಮತ್ತೆ ರಾಷ್ಟ್ರಸೇವೆಯಲ್ಲಿ ತೊಡಗಿದರು. ಇದೇ ಅವರನ್ನು ವಿಶೇಷವಾಗಿಸುತ್ತದೆ.ನಾವು ಕನ್ನಡಿಯ ಮುಂದೆ ನಿಂತು ಒಂದು ಸಣ್ಣ ಮೊಡವೆ ಬಂದರೂ ಬೇಸರಪಡುತ್ತೇವೆ. ಕೂದಲು ಉದುರಿದರೂ ಚಿಂತಿಸುತ್ತೇವೆ. ಆದರೆ ಈ ಯೋಧ ತನ್ನ ಮುಖವನ್ನೇ ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ದೇಶಸೇವೆಯ ಸಂಕಲ್ಪವನ್ನೂ ಬಿಡಲಿಲ್ಲ.
ಇಂದು ಸೋಶಿಯಲ್ ಮೀಡಿಯಾದಲ್ಲಿ ಅವರ ಚಿತ್ರಗಳು ವೈರಲ್ ಆಗುತ್ತವೆ. ಮಕ್ಕಳು ಅವರನ್ನು ಸೂಪರ್ ಹೀರೋ ಎಂದು ಕರೆಯುತ್ತಾರೆ. ಆದರೆ ಅವರ ನಿಜವಾದ ಶಕ್ತಿ ಇರುವುದು ಅವರ ಮನಸ್ಸಿನಲ್ಲಿ. ಒಬ್ಬ ಸೈನಿಕನಿಗೆ ಮುಖಕ್ಕಿಂತ ಮುಖ್ಯವಾದದ್ದು ದೇಶ. ದೇಹಕ್ಕಿಂತ ಮುಖ್ಯವಾದದ್ದು ಕರ್ತವ್ಯ. ಜೀವಕ್ಕಿಂತ ಮುಖ್ಯವಾದದ್ದು ತ್ರಿವರ್ಣ ಧ್ವಜ. ಅದನ್ನು ಲೆಫ್ಟಿನೆಂಟ್ ಕರ್ನಲ್ ರಿಷಿ ರಾಜಲಕ್ಷ್ಮಿ ನಾಯರ್ ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ.