24 ಗಂಟೆಯಲ್ಲೇ ಪಂಪ್‌ಸೆಟ್ ಕಳ್ಳನ ಬಂಧನ; ನಾಲ್ಕು ಪಂಪ್‌ಸೆಟ್ ವಶಕ್ಕೆ
ಶಿರಸಿ: ರೈತರ ತೋಟಗಳಲ್ಲಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ಕಳವು ಮಾಡುತ್ತಿದ್ದ ಅಂತರಜಿಲ್ಲಾ ಕಳ್ಳನನ್ನು ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯೊಳಗೆ ಬಂಧಿಸಿ, ನಾಲ್ಕು ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 4ರಂದು ಶಿರಸಿ ತಾಲೂಕಿನ ಬೈರುಂಬೆ ಗ್ರಾಮದ ಅರಸಾಪುರದ ನಿವಾಸಿ ಸುಬ್ರಾಯ ರಾಮಚಂದ್ರ ಹೆಗಡೆ ಅವರ ತೋಟದ ಬಾವಿಯಲ್ಲಿ ಅಳವಡಿಸಿದ್ದ ಪಂಪ್‌ಸೆಟ್ ಕಳವಾಗಿತ್ತು. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಪೊಲೀಸರು ರಚಿಸಿದ್ದ ವಿಶೇಷ ತನಿಖಾ ತಂಡವು ಪ್ರಕರಣ ದಾಖಲಾದ 24 ಗಂಟೆಯಲ್ಲೇ ಕುಮಾರ ಅರ್ಜುನ ವರ್ದಿ (27), ಸಾಬದಮಗಟ್ಟಿ, ಹಾನಗಲ್, ಹಾವೇರಿ ಜಿಲ್ಲೆ ನಿವಾಸಿಯನ್ನು ಬಂಧಿಸಿ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಇದೇ ರೀತಿಯ ಇನ್ನೂ ಮೂರು ಪಂಪ್‌ಸೆಟ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಆತನಿಂದ ವಿವಿಧ ಕಂಪನಿಗಳ ಸುಮಾರು ₹33,150 ಮೌಲ್ಯದ ಒಟ್ಟು ನಾಲ್ಕು ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತನ ವಿರುದ್ಧ ಈ ಪ್ರಕರಣದ ಹೊರತಾಗಿ ಹಾವೇರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ. ಹಾಗೂ ಗೀತಾ ಪಾಟೀಲ್, ಶಿರಸಿ ಉಪ ವಿಭಾಗದ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ, ಶಿರಸಿ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ರಮೇಶ್ ಹೂಗಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿದೆ.