Monday, September 7, 2026
Join WhatsApp Group
HomeLocal Newsಸೀಬರ್ಡ್‌ ಮುಖ್ಯದ್ವಾರದಲ್ಲಿ ಕನ್ನಡವೇ ನಾಪತ್ತೆ; ಕ್ರಮಕ್ಕೆ ಕರವೇ ಮನವಿ

ಸೀಬರ್ಡ್‌ ಮುಖ್ಯದ್ವಾರದಲ್ಲಿ ಕನ್ನಡವೇ ನಾಪತ್ತೆ; ಕ್ರಮಕ್ಕೆ ಕರವೇ ಮನವಿ

ಕಾರವಾರ: ಕಾರವಾರದ ಭಾರತೀಯ ನೌಕಾಪಡೆಯ ಸೀಬರ್ಡ್‌ ‘ಕದಂಬ’ ನೌಕಾನೆಲೆಯ ನೂತನ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಉತ್ತರ ಕನ್ನಡ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಕರ್ನಾಟಕ ಅಧಿಕೃತ ಭಾಷಾ ಕಾಯ್ದೆಯ ಪ್ರಕಾರ ರಾಜ್ಯದಲ್ಲಿ ಸಾರ್ವಜನಿಕ ಸಂಪರ್ಕ ಹೊಂದಿರುವ ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಮುಖ ಸ್ಥಾನ ನೀಡುವುದು ಕಡ್ಡಾಯವಾಗಿದೆ. ಆದರೆ ಕಾರವಾರದಲ್ಲಿರುವ ಸೀಬರ್ಡ್‌ ನೌಕಾನೆಲೆಯ ಮುಖ್ಯದ್ವಾರದಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ.

ವಿಶೇಷವಾಗಿ, ಈ ನೌಕಾನೆಲೆಗೆ ಕರ್ನಾಟಕದ ಐತಿಹಾಸಿಕ ‘ಕದಂಬ’ ರಾಜವಂಶದ ಹೆಸರನ್ನು ಇಡಲಾಗಿದ್ದರೂ, ಅದೇ ಸ್ಥಳದಲ್ಲಿ ಕನ್ನಡ ಭಾಷೆಗೆ ಸ್ಥಾನ ನೀಡದಿರುವುದು ವಿಪರ್ಯಾಸವಾಗಿದೆ. ಕರ್ನಾಟಕದ ನೆಲದಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆಯೊಂದು ರಾಜ್ಯದ ಅಧಿಕೃತ ಭಾಷೆಗೆ ಗೌರವ ನೀಡಬೇಕಾದ ಜವಾಬ್ದಾರಿ ಹೊಂದಿದೆ ಎಂದು ಕರವೇ ಮನವಿಯಲ್ಲಿ ಒತ್ತಿಹೇಳಿದೆ.

ಮನವಿ ಸಲ್ಲಿಸಿದ ದಿನಾಂಕದಿಂದ 15 ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ, ಸೀಬರ್ಡ್‌ ಮುಖ್ಯದ್ವಾರದ ಬಳಿ ಕನ್ನಡ ಜಾಗೃತಿ ಚಳವಳಿ, ಧರಣಿ ಸೇರಿದಂತೆ ಕಾನೂನುಬದ್ಧ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ್, ಯುವ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ್ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಪಾದ್ ಶೆಟ್ಟಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಶ್ರೀಕಾಂತ ಪಟಗಾರ, ಕಾರವಾರ ನಗರ ಘಟಕದ ರಾಜ ನಾಯ್ಕ್ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share