Friday, July 24, 2026
Join WhatsApp Group
HomeStateರಾಜ್ಯಮಟ್ಟದ ವಿಜ್ಞಾನ ಶಿಕ್ಷಕರ ಸಂಘದ ರಚನೆ

ರಾಜ್ಯಮಟ್ಟದ ವಿಜ್ಞಾನ ಶಿಕ್ಷಕರ ಸಂಘದ ರಚನೆ

ಸಂಘಟನೆಯ ಕೊರತೆ ನೀಗಿಸಲು ದಿಟ್ಟ ಹೆಜ್ಜೆ

ಧಾರವಾಡ: ವಿದ್ಯಾರ್ಥಿ, ವಿಜ್ಞಾನ ಹಾಗೂ ವಿಜ್ಞಾನ ಶಿಕ್ಷಕರ ಅಭ್ಯುದಯ ಮತ್ತು ಗುಣಾತ್ಮಕ ಶಿಕ್ಷಣದ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಶಿಕ್ಷಕರ ಸಂಘವನ್ನು ಸರ್ಕಾರದ ನಿಯಮಾವಳಿಗಳಂತೆ ಅಧಿಕೃತವಾಗಿ ನೋಂದಣಿ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ್ ಪಾಟೀಲ್ ಕುಲಕರ್ಣಿ ತಿಳಿಸಿದ್ದಾರೆ.

ಧಾರವಾಡದ ಕರ್ನಾಟಕ ಭವನದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಿಜ್ಞಾನ ಕ್ಷೇತ್ರದ ನವೀನ ಸಂಶೋಧನೆಗಳು, ಶೋಧನೆಗಳು ಹಾಗೂ ಶಿಕ್ಷಣದ ಏಕರೂಪತೆಯನ್ನು ರಾಜ್ಯದ ಎಲ್ಲ ಶಿಕ್ಷಕರಿಗೂ ತಲುಪಿಸುವ ಉದ್ದೇಶದಿಂದ ಈ ಸಂಘ ರಚಿಸಲಾಗಿದೆ ಎಂದರು.

ಬಹಳ ವರ್ಷಗಳಿಂದ ವಿಜ್ಞಾನ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಪ್ ಗುಂಪುಗಳಲ್ಲಿ ಮಾತ್ರ ಹಂಚಿಕೊಂಡು ಸುಮ್ಮನಾಗುತ್ತಿದ್ದರು. ಸರ್ಕಾರದ ಮಟ್ಟದಲ್ಲಿ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮಂಡಿಸಲು ಸಂಘಟನೆಯ ಕೊರತೆ ಎದುರಾಗುತ್ತಿತ್ತು. ಇದೀಗ ಆ ಕೊರತೆಯನ್ನು ನೀಗಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನ ಶಿಕ್ಷಕರ ಸಹಯೋಗದೊಂದಿಗೆ ಸಂಘವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಶಿಕ್ಷಕರ ಸಮ್ಮುಖದಲ್ಲಿ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿ ಸಂಘವನ್ನು ನೋಂದಣಿ ಮಾಡಲಾಯಿತು. ಸಂಘದ ಕಚೇರಿಯನ್ನು ಧಾರವಾಡದಲ್ಲಿ ಶಿಕ್ಷಕ ಪ್ರಮೋದ್ ವಾದಿರಾಜ ಅವರು ಉಚಿತವಾಗಿ ನೀಡಿದ ಕೊಠಡಿಯಲ್ಲಿ ಆರಂಭಿಸಲಾಗುವುದು ಎಂದು ಘೋಷಿಸಲಾಯಿತು.

ಸಂಘದ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಕಾರಿಣಿ ಸಭೆ ನಡೆಸಿ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳ ಕುರಿತು ತೀರ್ಮಾನಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಸಮಾವೇಶಗಳನ್ನು ಆಯೋಜಿಸಿ ಸಂಘದ ಬಲವರ್ಧನೆ ಹಾಗೂ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.

ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿಜ್ಞಾನ ಶಿಕ್ಷಕರನ್ನು ಒಂದೇ ವೇದಿಕೆಗೆ ತಂದು ವಿದ್ಯಾರ್ಥಿ, ವಿಜ್ಞಾನ ಹಾಗೂ ಶಿಕ್ಷಕರ ಹಿತ ಕಾಯುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸಲಿದೆ ಎಂದು ಸಹ ಕಾರ್ಯದರ್ಶಿ ಎಂ. ರಾಜಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ನಾಲ್ಕು ವಿಭಾಗಗಳಿಂದ ನಾಲ್ವರು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯದರ್ಶಿಯಾಗಿ ಬಸವರಾಜ್, ಸಹ ಕಾರ್ಯದರ್ಶಿಯಾಗಿ ಎಂ. ರಾಜಶೇಖರ್, ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಗಜಕೋಶ, ಖಜಾಂಚಿಯಾಗಿ ಸಂತೋಷ್ ಕುಮಾರ್ ಹಾಗೂ ಸಂವಹನಕಾರ ಮತ್ತು ಪತ್ರಿಕಾ ಪ್ರತಿನಿಧಿಯಾಗಿ ಸಂಜೀವ ಕುಮಾರ್ ಭೂಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ 14 ಮಂದಿ ನಿರ್ದೇಶಕರನ್ನೂ ಆಯ್ಕೆ ಮಾಡಲಾಗಿದೆ.

ಸಂಘದ ಸಹ ಕಾರ್ಯದರ್ಶಿ ಎಂ. ರಾಜಶೇಖರ

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share