Saturday, September 19, 2026
Join WhatsApp Group
HomeCrime26.01 ಲಕ್ಷ ರೂ ಪಾವತಿಸಿದರೂ ತೀರದ ಬಡ್ಡಿ ದಾಹ!

26.01 ಲಕ್ಷ ರೂ ಪಾವತಿಸಿದರೂ ತೀರದ ಬಡ್ಡಿ ದಾಹ!

ದುಡ್ಡು ಕೊಡ್ತೀಯಾ, ಶೂಟ್ ಮಾಡಬೇಕಾ?!

ಕಾರವಾರ: ಸಾಲದ ಹಣಕ್ಕೆ ಸಂಬಂಧಿಸಿದಂತೆ ₹26.01 ಲಕ್ಷ ಪಾವತಿಸಿದರೂ ಇನ್ನೂ ಬಡ್ಡಿ ಹಣ ನೀಡುವಂತೆ ಒತ್ತಾಯಿಸಿ, ಸರ್ವಿಸ್ ರಿವಾಲ್ವರ್‌ನಿಂದ ಶೂಟ್ ಮಾಡುವುದಾಗಿ ಹಾಗೂ ಮುಂಬೈನಿಂದ ರೌಡಿಗಳನ್ನು ಕರೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾರವಾರ ತಾಲೂಕಿನ ಶೇಜವಾಡ ನಿವಾಸಿ, ಸೆಕ್ಯುರಿಟಿ ಕೆಲಸ ಮಾಡುತ್ತಿರುವ ಪ್ರಣೀತ ದಿಗಂಬರ ಶೇಜವಾಡಕರ (43) ಅವರು ದೂರು ನೀಡಿದ್ದು, ಕಾರವಾರದ ಕಾಜುಬಾಗದ ರೋಹನ್ ನರಸಿಂಹ ರಾಯ್ಕರ, ಪಿಕಳೆ ರಸ್ತೆಯ ಸುನೀಲ್ ಸದಾನಂದ ಕಲ್ಗುಟಕರ ಹಾಗೂ ಸಂಪದಾ ಸುನೀಲ್ ಕಲ್ಗುಟಕರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಹಣದ ಅಗತ್ಯವಿದ್ದ ಸಂದರ್ಭದಲ್ಲಿ ಪರಿಚಯದ ರೋಹನ್ ರಾಯ್ಕರ ಅವರಿಂದ ಸಾಲ ಪಡೆಯಲಾಗಿತ್ತು. ₹1 ಲಕ್ಷಕ್ಕೆ ₹10 ಸಾವಿರ ಬಡ್ಡಿಯನ್ನು ಮೊದಲೇ ಕಡಿತ ಮಾಡಿಕೊಂಡು ₹90 ಸಾವಿರ ನೀಡಲಾಗಿತ್ತು. ಇದೇ ರೀತಿಯಾಗಿ ಹಂತ ಹಂತವಾಗಿ ದೂರುದಾರ ಹಾಗೂ ಅವರ ಪತ್ನಿಯ ಯೂನಿಯನ್ ಬ್ಯಾಂಕ್ ಖಾತೆಗಳಿಗೆ ಒಟ್ಟು ₹12.28 ಲಕ್ಷ ಹಣವನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸೂಚನೆಯಂತೆ ಮೊದಲು ಸಂಪದಾ ಕಲ್ಗುಟಕರ ಅವರ ಹೆಸರಿನಲ್ಲಿ ಕರಾರು ಪತ್ರ ಮಾಡಿಕೊಡಲಾಗಿತ್ತು. ಬಳಿಕ ಅದನ್ನು ರದ್ದುಪಡಿಸಿ, 2025ರ ಆಗಸ್ಟ್ 23ರಂದು ಸುನೀಲ್ ಕಲ್ಗುಟಕರ ಅವರ ಹೆಸರಿನಲ್ಲಿ ಮತ್ತೊಂದು ಕರಾರು ಪತ್ರ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ದೂರುದಾರರು ತಮ್ಮ ಬ್ಯಾಂಕ್ ಖಾತೆಯ ಮೂರು ಖಾಲಿ ಚೆಕ್‌ಗಳನ್ನು ರೋಹನ್ ಅವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ.

ಆದರೆ, ಸಾಲ ಪಡೆದ ಬಳಿಕ 2024ರ ಆಗಸ್ಟ್ 8ರಿಂದ 2026ರ ಸೆಪ್ಟೆಂಬರ್ 1ರವರೆಗೆ ತಮ್ಮ ಹಾಗೂ ಪತ್ನಿಯ ಖಾತೆಗಳಿಂದ ಫೋನ್‌ಪೇ ಮತ್ತು ನಗದು ಮೂಲಕ ಒಟ್ಟು ₹26.01 ಲಕ್ಷ ಹಣವನ್ನು ರೋಹನ್ ಹಾಗೂ ಸುನೀಲ್ ಅವರಿಗೆ ಪಾವತಿಸಿರುವುದಾಗಿ ಪ್ರಣೀತ ದಿಗಂಬರ ಶೇಜವಾಡಕರ ದೂರಿನಲ್ಲಿ ತಿಳಿಸಿದ್ದಾರೆ.

ಕರಾರು ಪತ್ರದಲ್ಲಿ ನಮೂದಿಸಿರುವ ಅಸಲು ಹಣದ ಜೊತೆಗೆ ಬ್ಯಾಂಕ್ ಬಡ್ಡಿ ದರಕ್ಕಿಂತಲೂ ಹೆಚ್ಚಿನ ಮೊತ್ತ ಪಾವತಿಸಿದ್ದರೂ, ಕರಾರು ಪತ್ರ ರದ್ದುಪಡಿಸಿ ಖಾಲಿ ಚೆಕ್‌ಗಳನ್ನು ಹಿಂದಿರುಗಿಸುವಂತೆ ಕೇಳಿಕೊಂಡಾಗ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಬಡ್ಡಿ ಹಣ ನೀಡದಿದ್ದರೆ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಶೂಟ್ ಮಾಡುವುದಾಗಿ, ಮುಂಬೈನಿಂದ ರೌಡಿಗಳನ್ನು ಕರೆಸಿ ಕೊಲೆ ಮಾಡುವುದಾಗಿ ಹಾಗೂ ಜೆಸಿಬಿ ತಂದು ಮನೆ ಕೆಡವುವುದಾಗಿ ಸುನೀಲ್ ಕಲ್ಗುಟಕರ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರ ಪತ್ನಿಗೂ ಪದೇಪದೇ ಕರೆ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ದೂರುದಾರರ ₹13.50 ಲಕ್ಷ ಮೊತ್ತದ ಚೆಕ್‌ನ್ನು ಬೌನ್ಸ್ ಮಾಡಿಸಿ, ಇನ್ನೂ ಹಣ ನೀಡಬೇಕು, ಇಲ್ಲದಿದ್ದರೆ ಸರಿಯಾದ ಪಾಠ ಕಲಿಸುತ್ತೇನೆ ಎಂದು ಬೆದರಿಸಲಾಗಿದೆ ಎಂಬ ಆರೋಪವೂ ದೂರಿನಲ್ಲಿದೆ.ಈ ದೂರಿನ ಆಧಾರದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share