ಲಾರಿ ಸಂಘದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ನಾಗರಿಕ ವೇದಿಕೆ ಬೆಂಬಲ
ಯಲ್ಲಾಪುರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಲಾರಿ ಮಾಲೀಕರು, ಯಂತ್ರೋಪಕರಣಗಳ ಮಾಲೀಕರು ಹಾಗೂ ಕಾರ್ಮಿಕರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಲಾರಿ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ ಸೆ.16ರಿಂದ ಕೈಗಾ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಮುಂದಾಗಿದೆ.
ಲಾರಿ ಸಂಘದ ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿರುವ ನಾಗರಿಕ ವೇದಿಕೆ, ಸಂಬಂಧಪಟ್ಟ ಇಲಾಖೆ, ಕೈಗಾ ಸ್ಥಾವರದ ಅಧಿಕಾರಿಗಳು, ಗುತ್ತಿಗೆ ಸಂಸ್ಥೆಗಳು ಹಾಗೂ ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದೆ.
ಕೈಗಾದಲ್ಲಿ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಕಾಮಗಾರಿ ಮುಂದಿನ ನಾಲ್ಕೈದು ವರ್ಷಗಳ ಕಾಲ ನಡೆಯಲಿದೆ. ಹೀಗಾಗಿ ಕಾಮಗಾರಿಗೆ ಅಗತ್ಯವಾಗುವ ಜಲ್ಲಿ, ಕಲ್ಲು, ಮಣ್ಣು ಸೇರಿದಂತೆ ನಿರ್ಮಾಣ ಸಾಮಗ್ರಿಗಳ ಸಾಗಣೆ, ಲಾರಿ-ಟಿಪ್ಪರ್, ಟ್ರ್ಯಾಕ್ಟರ್, ಜೆಸಿಬಿ ಸೇರಿದಂತೆ ಲಭ್ಯವಿರುವ ಯಂತ್ರೋಪಕರಣಗಳು ಹಾಗೂ ವಿವಿಧ ಹಂತದ ಕಾರ್ಮಿಕರ ಸೇವೆಗೆ ಉತ್ತರ ಕನ್ನಡ ಜಿಲ್ಲೆಯವರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಲಾರಿ ಸಂಘದ ಪ್ರಮುಖ ಬೇಡಿಕೆಯಾಗಿದೆ.
ಈ ಸಂಬಂಧ ಕಳೆದ ಎರಡು-ಮೂರು ತಿಂಗಳಿಂದ ಸಂಘ ಪ್ರಯತ್ನ ನಡೆಸುತ್ತಿದ್ದು, ಈಗಾಗಲೇ ಎರಡು ಬಾರಿ ಕೈಗಾ ಸ್ಥಾವರದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದೆ. ಜಿಲ್ಲಾಧಿಕಾರಿಗಳ ಗಮನಕ್ಕೂ ಸಮಸ್ಯೆಯನ್ನು ತರಲಾಗಿದ್ದು, ಜಿಲ್ಲಾಧಿಕಾರಿಗಳು ಕೂಡ ಬೇಡಿಕೆಗಳ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೈಗಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ಸಂಘ ತಿಳಿಸಿದೆ. ಆದರೆ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂಬುದು ಸಂಘದ ಆರೋಪ.
ಜಿಲ್ಲೆಯಲ್ಲಿ ಈಗಾಗಲೇ ಹಲವು ಬೃಹತ್ ಯೋಜನೆಗಳು ಬಂದಿವೆ. ಯೋಜನೆಗಳಿಗೆ ಭೂಮಿ ನೀಡುವವರು, ಪರಿಸರದ ಪರಿಣಾಮ ಎದುರಿಸುವವರು ಸ್ಥಳೀಯರಾಗಿದ್ದರೂ, ಯೋಜನೆಗಳಿಂದ ಸಿಗುವ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳಲ್ಲಿ ಹೊರಗಿನವರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂಬ ಅಸಮಾಧಾನ ಜಿಲ್ಲೆಯಲ್ಲಿದೆ.
ಉನ್ನತ ತಂತ್ರಜ್ಞರು ಮತ್ತು ವಿಶೇಷ ತಾಂತ್ರಿಕ ಸಿಬ್ಬಂದಿಯನ್ನು ಹೊರಗಿನಿಂದ ಕರೆತರುವ ಅಗತ್ಯವಿದ್ದರೂ, ಜಿಲ್ಲೆಯಲ್ಲೇ ಸಾಕಷ್ಟು ವಿದ್ಯಾವಂತ ಯುವಕರು, ತರಬೇತಿ ಪಡೆದ ಕಾರ್ಮಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡಬಲ್ಲ ಸಣ್ಣ ಉದ್ಯಮಿಗಳು ಇದ್ದಾರೆ. ಯೋಜನೆಗಳಿಂದ ಸಂತ್ರಸ್ತರಾದ ಕುಟುಂಬಗಳಿಗೂ ಸಾಧ್ಯವಾದಷ್ಟು ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ನಾಗರಿಕ ವೇದಿಕೆ ಹೇಳಿದೆ.
ಕೈಗಾ ಕಾಮಗಾರಿಗೆ ಅಗತ್ಯವಾಗುವ ನೂರಾರು ಲಾರಿ, ಟಿಪ್ಪರ್, ಟ್ರ್ಯಾಕ್ಟರ್, ಜೆಸಿಬಿ, ಕಾರು, ಟೆಂಪೋ ಸೇರಿದಂತೆ ಹಲವು ವಾಹನಗಳು ಜಿಲ್ಲೆಯಲ್ಲಿ ಲಭ್ಯವಿವೆ. ಇವುಗಳನ್ನು ಹೊರಗಿನಿಂದ ತರಿಸಿಕೊಳ್ಳುವ ಬದಲು ಸ್ಥಳೀಯ ಸಂಪನ್ಮೂಲಗಳಿಗೆ ಆದ್ಯತೆ ನೀಡಿದರೆ ಜಿಲ್ಲೆಯ ಸಣ್ಣ ಉದ್ಯಮಿಗಳು ಹಾಗೂ ಅವುಗಳನ್ನು ಅವಲಂಬಿಸಿರುವ ನೂರಾರು ಕುಟುಂಬಗಳಿಗೆ ನೇರವಾಗಿ ಪ್ರಯೋಜನವಾಗಲಿದೆ. ಆದರೆ ಕೈಗಾದಲ್ಲಿ ಬೃಹತ್ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಸಂಸ್ಥೆಗಳು ಸಿವಿಲ್ ಕಾಮಗಾರಿಗಳಲ್ಲಿಯೂ ಹೊರಗಿನ ಸಂಪನ್ಮೂಲಗಳನ್ನೇ ಬಳಸುತ್ತಿವೆ ಎಂದು ಲಾರಿ ಸಂಘ ಆರೋಪಿಸಿದೆ.
ಕೈಗಾ ವಿರೋಧಿ ಹೋರಾಟವಲ್ಲ
ತಮ್ಮ ಹೋರಾಟ ಕೈಗಾ ಯೋಜನೆಗೆ ವಿರೋಧವಾಗಿಲ್ಲ ಎಂದು ನಾಗರಿಕ ವೇದಿಕೆ ಸ್ಪಷ್ಟಪಡಿಸಿದೆ. 5 ಮತ್ತು 6ನೇ ಘಟಕಗಳಿಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಕಾಮಗಾರಿಯೂ ಆರಂಭವಾಗಿದೆ. ಆದರೆ ಇಂತಹ ಬೃಹತ್ ಯೋಜನೆ ನಡೆಯುತ್ತಿರುವಾಗ ಅದರ ಸುತ್ತಮುತ್ತಲಿನ ಹಾಗೂ ಸಂತ್ರಸ್ತ ಜಿಲ್ಲೆಯ ಜನರಿಗೂ ನ್ಯಾಯಯುತವಾಗಿ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳು ದೊರೆಯಬೇಕು ಎಂಬುದಷ್ಟೇ ಹೋರಾಟಗಾರರ ಬೇಡಿಕೆಯಾಗಿದೆ ಎಂದು ವೇದಿಕೆ ತಿಳಿಸಿದೆ.
ಮನವಿಗಳಿಗೆ ಇದುವರೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸೆ.16, ಬುಧವಾರ ಬೆಳಗ್ಗೆಯಿಂದ ಕೈಗಾ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಲಾರಿ ಸಂಘ ತಿಳಿಸಿದೆ. ಪ್ರತಿಭಟನೆ ಆರಂಭವಾಗುವ ಮುನ್ನವೇ ಸಂಬಂಧಪಟ್ಟವರು ಸ್ಥಳೀಯರ ಬೇಡಿಕೆಗಳನ್ನು ಪರಿಶೀಲಿಸಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಯಲ್ಲಾಪುರ ಆಗ್ರಹಿಸಿದ್ದಾರೆ.