ಕಾರವಾರದ ಈ ಸರ್ಕಾರಿ ಕಚೇರಿ ರಾಜ್ಯಕ್ಕೇ ಮಾದರಿ
ಕಾರವಾರ: ಸರ್ಕಾರಿ ಕಚೇರಿ ಎಂದರೆ ತಿಂಗಳಿಗೆ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಎಂಬುದು ಸಾಮಾನ್ಯ ಕಲ್ಪನೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಸಾಮಾಜಿಕ ಅರಣ್ಯ ವಿಭಾಗದ ಕಚೇರಿ ಈ ಕಲ್ಪನೆಯನ್ನೇ ಬದಲಿಸಿದೆ. ತನ್ನ ವಿದ್ಯುತ್ ಅಗತ್ಯವನ್ನು ತಾನೇ ಪೂರೈಸಿಕೊಳ್ಳುವುದಷ್ಟೇ ಅಲ್ಲ, ಹೆಚ್ಚುವರಿ ವಿದ್ಯುತ್‌ನ್ನು ಹೆಸ್ಕಾಂಗೆ ಮಾರಾಟ ಮಾಡಿ ಆದಾಯ ಗಳಿಸುತ್ತಿರುವ ಮೂಲಕ ರಾಜ್ಯದ ಸರ್ಕಾರಿ ಕಚೇರಿಗಳಿಗೆ ಮಾದರಿಯಾಗಿದೆ.
ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕಚೇರಿ ಕಟ್ಟಡದ ಮೇಲ್ಛಾವಣಿಯಲ್ಲಿ ರೂ.4.20 ಲಕ್ಷ ವೆಚ್ಚದಲ್ಲಿ 5 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಅಳವಡಿಸಲಾಗಿದೆ. ಏಪ್ರಿಲ್ 2026ರಿಂದ ಕಾರ್ಯಾರಂಭ ಮಾಡಿರುವ ಈ ಯೋಜನೆಯಿಂದ ತಿಂಗಳಿಗೆ ಸರಾಸರಿ 600 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಬೇಸಿಗೆ ಅವಧಿಯಲ್ಲಿ ಒಂದೇ ದಿನ 29.5 ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು, ಮಳೆಗಾಲದಲ್ಲೂ ಸರಾಸರಿ 6 ಯೂನಿಟ್ ಉತ್ಪಾದನೆ ಮುಂದುವರಿದಿದೆ. ಹಿಂದೆ ತಿಂಗಳಿಗೆ ₹5,000ರಿಂದ ₹6,000ವರೆಗೆ ಬರುತ್ತಿದ್ದ ವಿದ್ಯುತ್ ಬಿಲ್, ಇದೀಗ ನೆಟ್ ಮೀಟರಿಂಗ್ ವ್ಯವಸ್ಥೆಯಿಂದ ಕೇವಲ ₹1,000ರ ಕನಿಷ್ಠ ಶುಲ್ಕಕ್ಕೆ ಇಳಿದಿದೆ. ಇದರಿಂದ ಇಲಾಖೆಗೆ ಪ್ರತಿ ತಿಂಗಳು ಶೇ.80ಕ್ಕೂ ಹೆಚ್ಚು ವಿದ್ಯುತ್ ವೆಚ್ಚ ಉಳಿತಾಯವಾಗುತ್ತಿದೆ.
ಕಚೇರಿಯ ಬಳಕೆಯ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್‌ನ್ನು ಹೆಸ್ಕಾಂ ವಿದ್ಯುತ್ ಜಾಲಕ್ಕೆ ಪೂರೈಸಲಾಗುತ್ತಿದೆ. ಇದಕ್ಕಾಗಿ ಪ್ರತಿ ಯೂನಿಟ್‌ಗೆ ₹3.08ರಂತೆ ಹೆಸ್ಕಾಂ ಹಣ ಪಾವತಿಸುತ್ತಿದೆ. ಈಗಾಗಲೇ 292 ಯೂನಿಟ್ ಹೆಚ್ಚುವರಿ ವಿದ್ಯುತ್ವನ್ನು ಹೆಸ್ಕಾಂಗೆ ಮಾರಾಟ ಮಾಡಲಾಗಿದೆ.
ಜಿಲ್ಲೆಯ ದಿಶಾ ಸಭೆಯಲ್ಲಿ ಸರ್ಕಾರಿ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕ ಅಳವಡಿಸುವಂತೆ ಸಂಸದರು ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಇದು ಕೇವಲ ವಿದ್ಯುತ್ ಬಿಲ್ ಉಳಿಸುವ ಯೋಜನೆಯಲ್ಲ. ಸರ್ಕಾರಿ ಕಚೇರಿಗಳಲ್ಲೂ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗದ ಇನ್ನೂ ಏಳು ವಲಯ ಕಚೇರಿಗಳಲ್ಲಿ ಸೌರ ಮೇಲ್ಛಾವಣಿ ವ್ಯವಸ್ಥೆ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ತಿಳಿಸಿದ್ದಾರೆ.
ರಾಜ್ಯದ ಇತರೆ ಸರ್ಕಾರಿ ಕಚೇರಿಗಳೂ ಇದೇ ಮಾದರಿಯನ್ನು ಅನುಸರಿಸಿದರೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗುವುದರ ಜೊತೆಗೆ, ಹಸಿರು ಇಂಧನ ಬಳಕೆ ಹೆಚ್ಚಿಸಿ ಪರಿಸರ ಸಂರಕ್ಷಣೆಯಲ್ಲೂ ಮಹತ್ವದ ಹೆಜ್ಜೆ ಇಟ್ಟಂತಾಗಲಿದೆ.