Saturday, September 19, 2026
Join WhatsApp Group
HomeLocal Newsಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕ ಅಂಶಗಳ ಪಟ್ಟಿ ಬಿಡುಗಡೆ

ಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕ ಅಂಶಗಳ ಪಟ್ಟಿ ಬಿಡುಗಡೆ

ಶಿರಸಿ: ಪಶ್ಚಿಮ ಘಟ್ಟದ ಹಳ್ಳಿಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸದೆ, ಉಪಗ್ರಹ ಚಿತ್ರಗಳ ಆಧಾರದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಿರುವುದು ಸೇರಿದಂತೆ ಕಸ್ತೂರಿ ರಂಗನ್ ವರದಿಯಲ್ಲಿರುವುದಾಗಿ ಹೇಳಲಾದ ಹಲವು ಅವೈಜ್ಞಾನಿಕ ಅಂಶಗಳನ್ನು ಮುಂದಿಟ್ಟುಕೊಂಡು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸರ್ಕಾರಕ್ಕೆ ಶಿಫಾರಸುಗಳ ಪಟ್ಟಿಯನ್ನು ಸಲ್ಲಿಸಿದೆ.

ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿರುವ ವೇದಿಕೆ, ವರದಿಯಲ್ಲಿನ ಆಕ್ಷೇಪಾರ್ಹ ಅಂಶಗಳ ಕುರಿತು ಸಿದ್ಧಪಡಿಸಿದ ಶಿಫಾರಸು ಪಟ್ಟಿಯನ್ನು ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಅವರಿಂದ ಬಿಡುಗಡೆಗೊಳಿಸಿದೆ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಕಾರ್ಯಾಲಯದಲ್ಲಿ ಶಿಫಾರಸು ಪಟ್ಟಿ ಬಿಡುಗಡೆಗೊಂಡ ಬಳಿಕ, ರವೀಂದ್ರ ನಾಯ್ಕ ನೇತೃತ್ವದ ನಿಯೋಗ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಿ ವರದಿಯಲ್ಲಿನ ಅಂಶಗಳ ಕುರಿತು ಚರ್ಚಿಸಿದೆ. ಪರಿಸರ ಸೂಕ್ಷ್ಮ ಪ್ರದೇಶದ ಗಡಿಯನ್ನು ನಿಗದಿಪಡಿಸುವ ಮುನ್ನ ಭೌತಿಕ ಸರ್ವೇ ನಡೆಸಬೇಕು ಹಾಗೂ ಸಂಬಂಧಿಸಿದ ಗ್ರಾಮಸಭೆಗಳ ನಿರ್ಣಯಗಳಿಗೆ ಮಾನ್ಯತೆ ನೀಡಬೇಕು ಎಂದು ಸಚಿವರಲ್ಲಿ ಒತ್ತಾಯಿಸಿದೆ.

ಕಸ್ತೂರಿ ರಂಗನ್ ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಪಶ್ಚಿಮ ಘಟ್ಟದ ಗ್ರಾಮಗಳಿಗೆ ಭೇಟಿ ನೀಡದೆ ಕೇವಲ ಉಪಗ್ರಹ ಚಿತ್ರಗಳನ್ನು ಆಧಾರವಾಗಿಸಿಕೊಂಡಿದ್ದಾರೆ ಎಂಬುದು ಹೋರಾಟಗಾರರ ಪ್ರಮುಖ ಆಕ್ಷೇಪವಾಗಿದೆ. ಇದರ ಪರಿಣಾಮವಾಗಿ ಕೃಷಿ ಚಟುವಟಿಕೆ ನಡೆಯುತ್ತಿರುವ ಪ್ರದೇಶಗಳನ್ನೂ ನೈಸರ್ಗಿಕ ಅರಣ್ಯವೆಂದು ತಪ್ಪಾಗಿ ವರ್ಗೀಕರಿಸುವ ಸಾಧ್ಯತೆ ಇದೆ.

 ಒಂದು ಗ್ರಾಮದ ಸಣ್ಣ ಭಾಗ ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದರೂ ಇಡೀ ಗ್ರಾಮವನ್ನೇ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವುದು ಸಮರ್ಥನೀಯವಲ್ಲ ಎಂದು ನಿಯೋಗ ಸಚಿವರ ಗಮನಕ್ಕೆ ತಂದಿದೆ.

ಅದೇ ರೀತಿ ಪರಿಸರ ಸೂಕ್ಷ್ಮ ಪ್ರದೇಶಗಳ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಬಫರ್ ವಲಯವೆಂದು ಪರಿಗಣಿಸಿರುವುದು, ವರದಿ ಸಿದ್ಧಪಡಿಸುವ ವೇಳೆ ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮಸಭೆಗಳ ಅಭಿಪ್ರಾಯಕ್ಕೆ ಸೂಕ್ತ ಮಾನ್ಯತೆ ನೀಡದಿರುವುದು ಮತ್ತು ಸಾರ್ವಜನಿಕ ವಿಚಾರಣೆ ನಡೆಸದಿರುವುದು ವರದಿಯ ತಾಂತ್ರಿಕ ದೋಷಗಳಿಗೆ ಕಾರಣವಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.

ಇದೇ ವೇಳೆ, ಅರಣ್ಯವಾಸಿಗಳ ಹಕ್ಕುಗಳ ಪರವಾಗಿ ಮೂರು ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿರುವ ರವೀಂದ್ರ ನಾಯ್ಕ ಅವರನ್ನು ಸಚಿವ ರಾಮಲಿಂಗ ರೆಡ್ಡಿ ಅವರು ಜಗದ್ಗುರು ಭಗೀರಥಾನಂದಪುರಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ಸನ್ಮಾನಿಸಿ, ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.

ನಿಯೋಗದಲ್ಲಿ ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ, ಜಿಲ್ಲಾ ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಬಿಡಿ ನಾಯ್ಕ ಕುರಗೆತೋಟ, ಭಾಸ್ಕರ್ ಕುರಗೆತೋಟ, ಶ್ರೀಧರ ಎಸ್. ಹೆಗಡೆ ಕೆರೆಮನೆ, ಜಗದೀಶ್ ನಾಯ್ಕ ಬಿಕ್ಕಳಸೆ ಹಾಗೂ ಆರೀಫ್ ಶೇಖ್ ಬಿಸಲಕೊಪ್ಪ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share