Friday, July 24, 2026
Join WhatsApp Group
HomeStateವಿದ್ಯಾರ್ಥಿ ಬಸ್‌ ಪಾಸ್‌ ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿ ಬಸ್‌ ಪಾಸ್‌ ಅರ್ಜಿ ಸಲ್ಲಿಸುವುದು ಹೇಗೆ?

ಬೆಂಗಳೂರು: 2026-27ನೇ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಜೂನ್‌ 1ರಿಂದ ಆರಂಭವಾಗಲಿದ್ದು, ಸಾರ್ವಜನಿಕ ಬಸ್‌ಗಳಲ್ಲಿ ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ರಾಜ್ಯ ರಸ್ತೆ ಸಾರಿಗೆ ನಿಗಮವು ವಿದ್ಯಾರ್ಥಿ ಬಸ್‌ ಪಾಸ್‌ ವಿತರಣೆ ಪ್ರಕ್ರಿಯೆ ಆರಂಭಿಸಲು ಸಜ್ಜಾಗಿದೆ.

ಈ ವರ್ಷ ಸಂಪೂರ್ಣ ಗಣಕೀಕೃತ ವ್ಯವಸ್ಥೆಯಡಿ ಸೇವಾಸಿಂಧು ಪೋರ್ಟಲ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ.

ಮಾಸಿಕ ಹಾಗೂ ವಾರ್ಷಿಕ ವಿದ್ಯಾರ್ಥಿ ಪಾಸ್‌ಗಳಿಗೆ ಮೇ 29ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಅಥವಾ ಪೋಷಕರು ಸೇವಾಸಿಂಧು ಪೋರ್ಟಲ್‌ (https://sevasindhuservices.karnataka.gov.in/buspassservices/) ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಅರ್ಜಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.

ಸ್ವತಃ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಕರ್ನಾಟಕ-ಒನ್‌, ಗ್ರಾಮ-ಒನ್‌ ಹಾಗೂ ಬೆಂಗಳೂರು-ಒನ್‌ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. ಈ ಸೇವೆಗೆ ಸರ್ಕಾರ ನಿಗದಿಪಡಿಸಿರುವ 30 ರೂ ಸೇವಾ ಶುಲ್ಕ ಮಾತ್ರ ಪಾವತಿಸಬೇಕಿದ್ದು, ಅದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಬಾರದು ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಪಾಸ್‌ ವೆಬ್‌ಸೈಟ್‌ (https://ksrtc.karnataka.gov.in/studentpass) ನಿಂದ ‘Declaration Form’ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ಜೊತೆಗೆ, ತಮಗೆ ಅನುಕೂಲಕರವಾದ ಪಾಸ್‌ ಕೌಂಟರ್‌ ಆಯ್ಕೆ ಮಾಡುವುದು ಕಡ್ಡಾಯವಾಗಿದೆ.

ಅರ್ಜಿ ಪರಿಶೀಲನೆ ಪೂರ್ಣಗೊಂಡ ಬಳಿಕ, ಪಾಸ್‌ ಮಂಜೂರಾದ ಮಾಹಿತಿ ಹಾಗೂ ಕೌಂಟರ್‌ ವಿಳಾಸವನ್ನು ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕ ಕಳುಹಿಸಲಾಗುತ್ತದೆ. ಜೂನ್‌ 1ರಿಂದ ಆಯ್ಕೆ ಮಾಡಿದ ಕೌಂಟರ್‌ಗಳಲ್ಲಿ ವಿದ್ಯಾರ್ಥಿ ಪಾಸ್‌ ವಿತರಣೆ ಆರಂಭವಾಗಲಿದೆ.

ವಿದ್ಯಾರ್ಥಿಗಳು ಕೌಂಟರ್‌ಗೆ ತೆರಳಿ ಶುಲ್ಕ ಪಾವತಿಸಿ ಪಾಸ್‌ ಪಡೆಯಬಹುದಾಗಿದ್ದು, ನಗದು, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಹಾಗೂ ಯುಪಿಐ ಮೂಲಕ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ ಅಡಿಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಸೌಲಭ್ಯ ಇರುವುದರಿಂದ, ಅರ್ಹ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಬಸ್‌ ಪಾಸ್‌ ಅಗತ್ಯವಿರುವುದಿಲ್ಲ ಎಂದು ನಿಗಮ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್‌ ಅಥವಾ ಸಹಾಯವಾಣಿ ಸಂಖ್ಯೆ 080-26252625 ಸಂಪರ್ಕಿಸಬಹುದು. callcentre@ksrtc.org ಇಮೇಲ್‌ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share