Monday, September 7, 2026
Join WhatsApp Group
HomeInformationSpecialಕೆಸುವಿನೆಲೆಯ ಮೇಲಿನ ನೀರ ಹನಿಯಂತೆ ಬದುಕಿಬಿಡಿ!

ಕೆಸುವಿನೆಲೆಯ ಮೇಲಿನ ನೀರ ಹನಿಯಂತೆ ಬದುಕಿಬಿಡಿ!

ಮಾರ್ನಿಂಗ್‌ ಬೈಟ್ಸ್

ಮಳೆಗಾಲದಲ್ಲಿ ಕೆಸುವಿನೆಲೆಯ ಮೇಲೆ ನೀರಿನ ಹನಿ ಬೀಳುವುದನ್ನು ನೋಡುವುದೇ ಒಂದು ಸೊಗಸು. ಬಿದ್ದ ನೀರಿನ ಹನಿ ಎಲೆಯ ಮೇಲೆ ಸ್ವಲ್ಪ ಕಾಲ ಇರುತ್ತದೆ, ಆದರೆ ಎಲೆಗೆ ಅಂಟಿಕೊಳ್ಳುವುದಿಲ್ಲ. ಗಾಳಿಗೆ ಎಲೆ ಸ್ವಲ್ಪ ಅಲುಗಾಡಿದರೂ ಸಾಕು ನೀರಿನ ಹನಿ ಜಾರಿಹೋಗುತ್ತದೆ. ಹಾಗಿದ್ದರೆ ಎಲೆಗೂ, ನೀರಿನ ಹನಿಗಳಿಗೂ ಯಾವುದೇ ಸಂಬಂಧವಿಲ್ಲವೇ?!

ಬಿದ್ದ ಹನಿಗಳೆಲ್ಲಾ ನೆಲ ಸೇರದೆ ಹಾಗೆಯೇ ಎಲೆಯಲ್ಲೇ ನಿಂತಿದ್ದರೆ ಎಷ್ಟೊಂದು ಚೆಂದವಿರುತ್ತಿತ್ತು, ಆದರೆ ಬಿದ್ದ ನೀರೆಲ್ಲಾ ಎಲೆಯಲ್ಲೇ ನಿಂತರೆ ಎಲೆ ಭಾರವಾಗಿ ಹರಿದು ಹೋಗುತ್ತಿತ್ತು. ಅದಕ್ಕಾಗೇ ಎಲೆಗೆ ಅಂಟದೇ ಹಾಗೆಯೇ ಜಾರಿ ಹೋಗುವ ಸುಂದರವಾದ ಸಂಬಂಧವಿದೆ, ಆದರೆ ಬಂಧನವಿಲ್ಲ. ಬದುಕಿನಲ್ಲೂ ಹೀಗೆಯೇ ಇರಬೇಕು ಎಂಬುದನ್ನು ಕೆಸುವಿನೆಲೆಯ ಮೇಲಿನ ನೀರ ಹನಿ ನಮಗೆ ಮೌನವಾದ ಪಾಠವನ್ನು ಕಲಿಸುತ್ತದೆ.

ಇದನ್ನೇ ಮನುಷ್ಯನ ಜೀವನಕ್ಕೆ ಅನ್ವಯಿಸುವುದಾದರೆ ನಮ್ಮೆಲ್ಲರ ಜೀವನದಲ್ಲಿ ಸಂಬಂಧಗಳು ಬಹಳ ಮುಖ್ಯ. ತಂದೆ-ತಾಯಿ, ಮಕ್ಕಳು, ಸ್ನೇಹಿತರು, ಬಂಧು-ಬಳಗ ಸಹೋದ್ಯೋಗಿಗಳು ಹೀಗೆಯೇ ಹಲವರೊಂದಿಗೆ ನಾವು ಬದುಕನ್ನು ಹಂಚಿಕೊಳ್ಳುತ್ತೇವೆ. ಜೀವನದ ವಿವಿಧ ಹಂತಗಳಲ್ಲಿ ಅವರ ಸಂತೋಷದಲ್ಲಿ ಸಂತೋಷಪಡುತ್ತೇವೆ, ಅವರ ನೋವಿನಲ್ಲಿ ನಾವೂ ನೋವು ಅನುಭವಿಸುತ್ತೇವೆ. ಇದು ಬದುಕಿನ ಸಹಜ ಭಾಗ. ಆದರೆ ಸಂಬಂಧವಿದೆ ಎಂದ ಮಾತ್ರಕ್ಕೆ ಅತಿಯಾದ ನಿರೀಕ್ಷೆ, ಹಕ್ಕು, ಅವಲಂಬನೆಗಳು ಇರಬೇಕೆಂದಿಲ್ಲ.

ಕೆಲವರಿಂದ ನಮಗೆ ಸಿಗುವ ಪ್ರೀತಿ, ಗಮನ, ಗೌರವ ಮತ್ತು ಕಾಳಜಿಗೆ ಹೆಚ್ಚು ಅಂಟಿಕೊಳ್ಳುತ್ತೇವೆ. ಅವರು ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳದೇ ಇದ್ದಾಗ ನೋವಾಗುತ್ತದೆ. ನಿರ್ಲಕ್ಷಿಸಿದರೆ ಬೇಸರವಾಗುತ್ತದೆ. ದೂರವಾದರೆ ಬದುಕೇ ಮುಗಿಯಿತೇನೋ ಎನ್ನಿಸುತ್ತದೆ. ಹೀಗೆ ನಮ್ಮ ಸಂತೋಷದ ಕೀಲಿಯನ್ನು ಮತ್ತೊಬ್ಬರ ಕೈಗೆ ಕೊಟ್ಟುಬಿಡುತ್ತೇವೆ.

ಆದರೆ ಕೆಸುವಿನೆಲೆಯ ಮೇಲಿನ ನೀರ ಹನಿ ಇದಕ್ಕೆ ವಿರುದ್ಧವಾದ ಬದುಕನ್ನು ತೋರಿಸುತ್ತದೆ. ಎಲೆಯ ಮೇಲೆ ಇದ್ದಾಗಲೂ, ನೆಲದ ಮೇಲೆ ಬಿದ್ದಾಗಲೂ  ಯಾವುದನ್ನೂ ಕೂಡ ಇದೇ ತನ್ನದು ಎನ್ನುವ  ಅನಿವಾರ್ಯತೆಗೆ ಒಳಗಾಗಿಲ್ಲ. ಗಾಳಿ ಬೀಸಿದರೂ, ಎಲೆ ಅಲುಗಾಡಿದರೂ, ನೆಲಕ್ಕೆ ಬಿದ್ದಾಗಲೂ  ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಹಾಗೆಯೇ ನಾವು ಜನರನ್ನು ಪ್ರೀತಿಸಬೇಕು, ಆದರೆ ನಮ್ಮ ಅಸ್ತಿತ್ವವನ್ನು ಅವರ ಮೇಲೆ ಸಂಪೂರ್ಣವಾಗಿ ಅವಲಂಬಿಸಬಾರದು. ಯಾರ ಸಲುವಾಗಿಯೂ ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬಾರದು.

ಜೀವನದಲ್ಲಿ ಹಣ, ಮನೆ, ಆಸ್ತಿ, ಅಧಿಕಾರ, ಹೆಸರು, ಸ್ಥಾನಮಾನ ಇವೆಲ್ಲವೂ ಅಗತ್ಯವಾಗಬಹುದು. ಆದರೆ ಅವು ಯಾವುದೂ ಶಾಶ್ವತವಲ್ಲ. ಇಂದು ನಮ್ಮ ಬಳಿ ಇರುವ ವಸ್ತು ನಾಳೆ ಮತ್ತೊಬ್ಬರ ಬಳಿಯೂ ಇರಬಹುದು. ಇಂದು ನಮ್ಮನ್ನು ಹೊಗಳುವವರು ನಾಳೆ ನಮ್ಮನ್ನು ಮರೆತುಬಿಡಬಹುದು. ಇಂದು ನಿರ್ಲಕ್ಷಿಸಿದವರೇ ಇನ್ಯಾವತ್ತೋ ಬಳಿ ಬರಬಹುದು.  ಇಂದು ನಮ್ಮೊಂದಿಗಿರುವವರು ಮುಂದೆ ಬೇರೆ ದಾರಿಯಲ್ಲಿ ಸಾಗಬಹುದು. ಇದನ್ನು ಅರಿತು ಬದುಕಿದರೆ ಎಲ್ಲವನ್ನೂ ಕಳೆದುಕೊಂಡ ಸಂದರ್ಭದಲ್ಲೂ ಮನಸ್ಸು ಸಂಪೂರ್ಣವಾಗಿ ಕುಸಿದುಹೋಗುವುದಿಲ್ಲ.

ಯಾವುದಕ್ಕೂ ಅಂಟಿಕೊಳ್ಳದಿರುವುದು ಎಂದರೆ ಪ್ರೀತಿ ಇಲ್ಲದಿರುವುದಲ್ಲ. ಜವಾಬ್ದಾರಿಯಿಂದ ದೂರ ಓಡುವುದೂ ಅಲ್ಲ. ಬದಲಾಗಿ, ಪ್ರೀತಿಸಿಯೂ ಸ್ವಾತಂತ್ರ್ಯ ಕೊಡುವುದು, ಕಾಳಜಿ ವಹಿಸಿಯೂ ಹಕ್ಕನ್ನು ಸಾಧಿಸದಿರುವುದು, ಸಂಬಂಧಗಳನ್ನೆಲ್ಲಾ ಉಳಿಸಿಕೊಂಡೂ ಸ್ವಂತ ನೆಮ್ಮದಿಯನ್ನು ಕಳೆದುಕೊಳ್ಳದಿರುವುದು.

ಜೀವನದಲ್ಲಿ ಕೆಲವು ಸಂಗತಿಗಳು ನಮ್ಮ ಕೈಯಲ್ಲಿರುವುದಿಲ್ಲ. ಯಾರಾದರೂ ನಮ್ಮನ್ನು ಇಷ್ಟಪಡಬೇಕು, ಗೌರವಿಸಬೇಕು, ನಮ್ಮ ಮಾತಿನಂತೆ ನಡೆದುಕೊಳ್ಳಬೇಕು ಎಂಬುದನ್ನು ನಾವು ಬಲವಂತವಾಗಿ ಇನ್ನೊಬ್ಬರ ಮೇಲೆ ಹೇರಲು ಸಾಧ್ಯವಿಲ್ಲ. ಆದರೆ ಅವರ ವರ್ತನೆಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ನಿರ್ಧರಿಸುವ ಆಯ್ಕೆ ನಮ್ಮ ಕೈಯಲ್ಲೇ ಇದೆ.

ಕೆಸುವಿನೆಲೆಯ ಮೇಲಿನ ನೀರ ಹನಿಯಂತೆ ಬದುಕುವುದು ಎಂದರೆ ಜೀವನದಿಂದ ದೂರವಾಗುವುದು ಅಲ್ಲ. ಜೀವನವನ್ನು ಅದರ ಸಂಪೂರ್ಣತೆಯಲ್ಲಿ ಅನುಭವಿಸುತ್ತಾ, ಯಾರದ್ದೋ ಸುಪರ್ದಿಗೆ ನಮ್ಮ ಮನಸ್ಸಿನ ಸಂಪೂರ್ಣ ಸ್ವಾತಂತ್ರ್ಯವನ್ನು ಒಪ್ಪಿಸದೇ ಇರುವುದು. ಸಂತೋಷ ಬಂದಾಗ ಸ್ವೀಕರಿಸಬೇಕು, ದುಃಖ ಬಂದಾಗ ಅನುಭವಿಸಬೇಕು, ಸಂಬಂಧಗಳು ಬಂದಾಗ ಗೌರವಿಸಬೇಕು, ದೂರವಾದಾಗ ಒಪ್ಪಿಕೊಳ್ಳಬೇಕು.

ಕಡೆಯಲ್ಲಿ ನಮ್ಮ ಕೈಯಲ್ಲಿ ಶಾಶ್ವತವಾಗಿ ಉಳಿಯುವುದು ಯಾವುದೂ ಇಲ್ಲ. ನಾವು ಬಂದಂತೆಯೇ ಒಂದು ದಿನ ಹೋಗಲೇಬೇಕು. ಹಾಗಿರುವಾಗ ಸಿಕ್ಕಷ್ಟು ದಿನ ಪ್ರೀತಿಸೋಣ, ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡೋಣ. ಆದರೆ ಯಾವುದಕ್ಕೂ ಅತಿಯಾಗಿ ಅಂಟಿಕೊಳ್ಳದೆ, ಕಳೆದುಕೊಂಡಾಗಲೂ ನಮ್ಮೊಳಗಿನ ನೆಮ್ಮದಿಯನ್ನು ಉಳಿಸಿಕೊಳ್ಳೋಣ.

ಕೆಸುವಿನೆಲೆಯ ಮೇಲಿನ ನೀರ ಹನಿಯಂತೆ ಜೀವನದಲ್ಲಿ ಇರೋಣ, ಜೀವನಕ್ಕೆ ಬೆರೆತು ಬದುಕೋಣ. ಆದರೆ ಯಾವುದಕ್ಕೂ ನಮ್ಮನ್ನು ನಾವು ಕಳೆದುಕೊಳ್ಳುವಷ್ಟು ಅಂಟಿಕೊಳ್ಳದಿರೋಣ. ಏನಂತೀರಿ…?!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share