ಕುಮಟಾ: ಜಮೀನಿನಲ್ಲಿದ್ದ ಗೇರು ಗಿಡಗಳನ್ನು ಕಡಿದು ಸುಮಾರು 16 ಸಾವಿರ ರೂ ನಷ್ಟ ಉಂಟುಮಾಡಿದ್ದಾನೆಂಬ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಾ ತಾಲೂಕಿನ ಮಳವಳ್ಳಿ ಗ್ರಾಮದ ನಿವಾಸಿ ಕುಸುಮಾಕರ ನಾರಾಯಣ ಗೌಡ (45) ಪ್ರಕರಣದ ಆರೋಪಿಯಾಗಿದ್ದಾನೆ. ಮಳವಳ್ಳಿ ಗ್ರಾಮದ ಸರ್ವೆ ನಂ.47ರಲ್ಲಿ ಗೇರು ಗಿಡಗಳನ್ನು ಕಡಿದಿರುವುದಾಗಿ ಆರೋಪಿಸಲಾಗಿದೆ.
ಈ ಕುರಿತು ಮಳವಳ್ಳಿ, ಕೆಳಗಿನಕೇರಿ ನಿವಾಸಿ ಹಾಗೂ ರೈತ ಮಾಬ್ಲು ಜಟ್ಟು ಗೌಡ (53) ಅವರು ಕುಮಟಾ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ದೂರಿನ ಪ್ರಕಾರ, ಆ.18ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಆರೋಪಿತ ಕುಸುಮಾಕರ ನಾರಾಯಣ ಗೌಡ ನಾಗು, ಸುಬ್ರಾಯ, ಅಣ್ಣಪ್ಪ ಸೇರಿದಂತೆ ಇತರರೊಂದಿಗೆ ಸೇರಿಕೊಂಡು, ಫಿರ್ಯಾದಿಯ ಅಜ್ಜನ ಹೆಸರಿನಲ್ಲಿರುವ ಮಳವಳ್ಳಿ ಗ್ರಾಮದ ಸರ್ವೆ ನಂ.47ರ ಜಮೀನಿನಲ್ಲಿದ್ದ ಗೇರು ಗಿಡಗಳನ್ನು ಕಡಿದಿದ್ದಾರೆ. ಇದರಿಂದ ಸುಮಾರು 16 ಸಾವಿರ ರೂ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಖಾಸಗಿ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಕುಮಟಾ ನ್ಯಾಯಾಲಯ ಸೂಚಿಸಿದ ಹಿನ್ನೆಲೆಯಲ್ಲಿ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.