PhonePe ಮೂಲಕ ಮಟ್ಕಾ ಹಣ ಪಾವತಿಸಿಕೊಂಡವನ ವಿರುದ್ಧ ಪ್ರಕರಣ
ಶಿರಸಿ: ಒಂದು ರೂಪಾಯಿ ಹೂಡಿಕೆ ಮಾಡಿದರೆ 80 ರೂ ನೀಡುವುದಾಗಿ ಸಾರ್ವಜನಿಕರನ್ನು ಕರೆದು ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಸಂತೆಪೇಟೆ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ಸೆ.10ರಂದು ಓಸಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಬನವಾಸಿ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪೊಲೀಸ್ ಉಪನಿರೀಕ್ಷಕ ಮಹಾಂತಪ್ಪ ಕುಂಬಾರ ಹಾಗೂ ಸಿಬ್ಬಂದಿ ಪಂಚರೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದಾರೆ.
ಈ ವೇಳೆ ದಾಸನಕೊಪ್ಪದ ಸಂತೆ ಮಾರ್ಕೆಟ್ ರಸ್ತೆಯಲ್ಲಿ ಸಾರ್ವಜನಿಕರನ್ನು ಕೂಗಿ ಕರೆದು, ಓಸಿ ಮಟ್ಕಾದಲ್ಲಿ ಹಣ ಹೂಡಿಸುವಂತೆ ಮಾಡುತ್ತಿದ್ದ ಹೋಟೆಲ್ ವ್ಯಾಪಾರಿಯಾದ ದಯಾನಂದ ಬಾಣೇಶ್ವರ ಪ್ರಭು (48) ಎಂಬಾತ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತನು ಸಾರ್ವಜನಿಕರಿಂದ ಹಣ ಪಡೆದು, ಪಂಥ ಕಟ್ಟಿ ತನ್ನ ಬಳಿಯಿದ್ದ ಚೀಟಿಯಲ್ಲಿ ಓಸಿ ನಂಬರ್‌ಗಳನ್ನು ಬರೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮಾಹಿತಿದಾರರೊಬ್ಬರು ಓಸಿ ನಂಬರ್ ಹೇಳಿ, ಆರೋಪಿತನಿಂದ ನಂಬರ್ ಬರೆದ ಚೀಟಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, PhonePe ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಸ್ಕ್ರೀನ್‌ಶಾಟ್‌ಗಳನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಎರಡು ಓಸಿ ಚೀಟಿಗಳು, ಎರಡು PhonePe ಸ್ಕ್ರೀನ್‌ಶಾಟ್‌ಗಳು ಹಾಗೂ ಸುಮಾರು 3 ಸಾವಿರ ರೂ ಮೌಲ್ಯದ ಮೊಬೈಲ್ ಫೋನ್ ಸೇರಿದಂತೆ ಜೂಜಾಟಕ್ಕೆ ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೆ.10ರಂದು ಸಂಜೆ ದಾಳಿ ನಡೆಸಿದ ಬಳಿಕ, ಪ್ರಕರಣವು ಎನ್‌ಸಿ ಸ್ವರೂಪದ್ದಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.