ಅಂಕೋಲಾ: ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದ ಅಂಕೋಲಾ ತಾಲೂಕಿನ ಇಬ್ಬರು ಯುವತಿಯರು ಸುರಕ್ಷಿತವಾಗಿದ್ದು, ತಾವು ಇಷ್ಟಪಟ್ಟ ಯುವಕರನ್ನು ವಿವಾಹವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇಣಿ ಗಾಬಿತವಾಡಾದ ಸಾಕ್ಷಿ ಸೂರ್ಯಕಾಂತ ಚೋಡಣಕರ (19) ಅವರು ಜೂನ್ 23ರಂದು ಮನೆಯಿಂದ ಹೊರಗೆ ಹೋದ ಬಳಿಕ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದರು.
ಇದೇ ರೀತಿ ಕುಂಟಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೊಳ್ಳಿ ಗ್ರಾಮದ ಶ್ರೀದೇವಿ ಈಶ್ವರ ಗೌಡ (18) ಅವರು ಜೂನ್ 24ರಂದು ತಾಯಿಗೆ ಔಷಧಿ ತರಲು ಶಿರಸಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಅವರು ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದರು.
ಈಗ ಇಬ್ಬರೂ ಯುವತಿಯರು ಸುರಕ್ಷಿತವಾಗಿದ್ದು, ತಮ್ಮ ಇಚ್ಛೆಯಂತೆ ವಿವಾಹವಾಗಿರುವ ಮಾಹಿತಿ ಲಭ್ಯವಾಗಿದೆ. ಶ್ರೀದೇವಿ ಗೌಡ ಅವರು ಯಲ್ಲಾಪುರದ ದೇವಿ ದೇವಸ್ಥಾನದಲ್ಲಿ ವಿವಾಹವಾಗಿದ್ದರೆ, ಸಾಕ್ಷಿ ಚೋಡಣಕರ ಅವರು ತಾವು ಪ್ರೀತಿಸುತ್ತಿದ್ದ ಸಂಬಂಧಿ ಯುವಕನನ್ನು ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರೂ ವಯಸ್ಕರಾಗಿದ್ದು, ತಮ್ಮ ಇಚ್ಛೆಯಂತೆ ವಿವಾಹವಾಗಿರುವುದಾಗಿ ತಿಳಿದುಬಂದಿರುವ ಹಿನ್ನೆಲೆಯಲ್ಲಿ, ಪ್ರಕರಣ ಸದ್ಯಕ್ಕೆ ಸುಖಾಂತ್ಯವಾದ ಲಕ್ಷಣ ಕಂಡುಬಂದಿದೆ.