Friday, July 24, 2026
Join WhatsApp Group
HomeInformationಕಗ್ಗತ್ತಲಲ್ಲೂ ಹದ್ದಿನ ಕಣ್ಣು!

ಕಗ್ಗತ್ತಲಲ್ಲೂ ಹದ್ದಿನ ಕಣ್ಣು!

ಒಡಿಶಾದ ‘ಥರ್ಮಲ್ ಡ್ರೋನ್’ಗಳು ವನ್ಯಜೀವಿ ಸಂರಕ್ಷಣೆಗೆ ಹೊಸ ಅಸ್ತ್ರ

ರಾತ್ರಿಯಾಗುತ್ತಿದ್ದಂತೆ ಕಾಡಿನಂಚಿನ ಗ್ರಾಮಗಳಲ್ಲಿ ಭಯದ ವಾತಾವರಣ. ಯಾವ ಕ್ಷಣದಲ್ಲಿ ಆನೆಗಳ ಹಿಂಡು ಬಂದು ಬೆಳೆ ನಾಶ ಮಾಡುತ್ತದೋ, ಮನೆಗಳಿಗೆ ನುಗ್ಗುತ್ತದೋ ಎಂಬ ಆತಂಕ ರೈತರನ್ನು ಕಾಡುತ್ತದೆ. ಆದರೆ, ಇದೇ ಸಮಸ್ಯೆಗೆ ಒಡಿಶಾ ರಾಜ್ಯವು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರಿಣಾಮಕಾರಿ ಪರಿಹಾರ ಕಂಡುಕೊಂಡಿದೆ. ಕತ್ತಲೆಯನ್ನೇ ಭೇದಿಸಿ ಆನೆಗಳ ಚಲನವಲನವನ್ನು ಪತ್ತೆಹಚ್ಚುವ ‘ಥರ್ಮಲ್ ಡ್ರೋನ್’ಗಳು ಈಗ ಅರಣ್ಯ ಇಲಾಖೆಗೆ ಹದ್ದಿನ ಕಣ್ಣಾಗಿ ಪರಿಣಮಿಸಿವೆ.

ಒಡಿಶಾ ದೇಶದಲ್ಲೇ ಅತ್ಯಂತ ಸಮೃದ್ಧ ಅರಣ್ಯ ಸಂಪತ್ತನ್ನು ಹೊಂದಿರುವ ರಾಜ್ಯಗಳಲ್ಲಿ ಒಂದು. ಇಲ್ಲಿ ಆನೆ, ಹುಲಿ ಸೇರಿದಂತೆ ಅಪಾರ ವನ್ಯಜೀವಿಗಳಿವೆ. ಆದರೆ, ಕಳೆದ ಕೆಲವು ವರ್ಷಗಳಿಂದ ಮಾನವ-ಆನೆ ಸಂಘರ್ಷ ತೀವ್ರಗೊಂಡಿದ್ದು, ಬೆಳೆ ನಾಶ, ಮನೆಗಳಿಗೆ ಹಾನಿ ಹಾಗೂ ಪ್ರಾಣಹಾನಿಯ ಘಟನೆಗಳು ಹೆಚ್ಚಾಗಿವೆ. ಈ ಸಮಸ್ಯೆಯನ್ನು ಕೇವಲ ಮಾನವಶಕ್ತಿಯಿಂದ ನಿಯಂತ್ರಿಸುವುದು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಒಡಿಶಾ ಅರಣ್ಯ ಇಲಾಖೆ ಅತ್ಯಾಧುನಿಕ ಥರ್ಮಲ್ ಡ್ರೋನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.

ಸಾಮಾನ್ಯ ಡ್ರೋನ್ ಕ್ಯಾಮೆರಾಗಳು ಬೆಳಕಿದ್ದಾಗ ಮಾತ್ರ ಸ್ಪಷ್ಟ ಚಿತ್ರ ಸೆರೆಹಿಡಿಯುತ್ತವೆ. ಆದರೆ ಥರ್ಮಲ್ ಡ್ರೋನ್‌ಗಳಲ್ಲಿ ಅಳವಡಿಸಿರುವ ಇನ್‌ಫ್ರಾರೆಡ್ ಕ್ಯಾಮೆರಾಗಳು ಜೀವಿಗಳ ದೇಹದಿಂದ ಹೊರಹೊಮ್ಮುವ ಉಷ್ಣಾಂಶವನ್ನು ಪತ್ತೆಹಚ್ಚುತ್ತವೆ. ಹೀಗಾಗಿ ಕಗ್ಗತ್ತಲಿನಲ್ಲೂ ಕಾಡಿನೊಳಗೆ ಆನೆ, ಹುಲಿ ಅಥವಾ ಮನುಷ್ಯ ಎಲ್ಲಿದ್ದರೂ ಅವರ ಉಷ್ಣದ ಆಧಾರದ ಮೇಲೆ ಪರದೆಯ ಮೇಲೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾರೆ. ಹಗಲಿನಷ್ಟೇ ಸುಲಭವಾಗಿ ರಾತ್ರಿಯಲ್ಲೂ ನಿಗಾ ಇಡಲು ಇದು ನೆರವಾಗುತ್ತದೆ.

ಒಡಿಶಾದ ಕಿಯೋಂಜರ್, ಸಂಬಲ್ಪುರ್ ಹಾಗೂ ಢೆಂಕನಾಲ್ ಅರಣ್ಯ ವಿಭಾಗಗಳಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ಆನೆಗಳ ಹಿಂಡು ಹಳ್ಳಿಗಳತ್ತ ಚಲಿಸುತ್ತಿರುವುದು ಮುಂಚಿತವಾಗಿಯೇ ಪತ್ತೆಯಾದರೆ, ಡ್ರೋನ್ ಮೂಲಕ ಅವುಗಳ ಚಲನವಲನವನ್ನು ನಿರಂತರವಾಗಿ ಗಮನಿಸಲಾಗುತ್ತದೆ.

ಅಗತ್ಯವಿದ್ದರೆ ಡ್ರೋನ್‌ನಲ್ಲಿರುವ ಪ್ರಬಲ ಬೆಳಕು ಹಾಗೂ ಸೈರನ್ ಶಬ್ದ ಬಳಸಿ ಆನೆಗಳನ್ನು ಸುರಕ್ಷಿತವಾಗಿ ಮತ್ತೆ ಅರಣ್ಯದೊಳಕ್ಕೆ ತಿರುಗಿಸಲಾಗುತ್ತದೆ. ಇದರಿಂದ ಬೆಳೆ ಹಾನಿ ಹಾಗೂ ಮಾನವ ಜೀವಹಾನಿಯನ್ನು ಗಣನೀಯವಾಗಿ ತಡೆಯಲು ಸಾಧ್ಯವಾಗುತ್ತಿದೆ.

ಇದಕ್ಕೂ ಮೊದಲು ರಾತ್ರಿ ವೇಳೆ ಗಸ್ತು ತಿರುಗುವ ಅರಣ್ಯ ಸಿಬ್ಬಂದಿ ಆನೆಗಳ ದಾಳಿಯ ಅಪಾಯವನ್ನು ಎದುರಿಸಬೇಕಾಗುತ್ತಿತ್ತು. ಈಗ 3 ರಿಂದ 5 ಕಿಲೋಮೀಟರ್ ದೂರದಲ್ಲೇ ಸುರಕ್ಷಿತವಾಗಿ ಕುಳಿತು ಡ್ರೋನ್ ಮೂಲಕ ಸಂಪೂರ್ಣ ಪ್ರದೇಶದ ಮೇಲೆ ನಿಗಾ ಇಡಲು ಸಾಧ್ಯವಾಗಿದೆ. ಸಿಬ್ಬಂದಿಯ ಸುರಕ್ಷತೆಯೂ ಹೆಚ್ಚಿದೆ.

ದಟ್ಟ ಅರಣ್ಯದಲ್ಲಿ ಆನೆಗಳ ನಿಖರ ಎಣಿಕೆ ನಡೆಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿತ್ತು. ವಿಶೇಷವಾಗಿ ಮರಿಗಳ ಸಂಖ್ಯೆ, ದೊಡ್ಡ ಆನೆಗಳ ಸಂಖ್ಯೆ ಹಾಗೂ ಹಿಂಡಿನ ಚಲನವಲನವನ್ನು ಗುರುತಿಸುವುದು ಕಷ್ಟವಾಗುತ್ತಿತ್ತು. ಥರ್ಮಲ್ ಕ್ಯಾಮೆರಾಗಳ ಸಹಾಯದಿಂದ ಈಗ ಪ್ರತಿಯೊಂದು ಪ್ರಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸಿ ಅತ್ಯಂತ ನಿಖರವಾದ ವರದಿಗಳನ್ನು ಸಿದ್ಧಪಡಿಸಲಾಗುತ್ತಿದೆ.

ಈ ಡ್ರೋನ್‌ಗಳ ಉಪಯೋಗ ಕೇವಲ ಆನೆಗಳಿಗಷ್ಟೇ ಸೀಮಿತವಾಗಿಲ್ಲ. ರಾತ್ರಿ ವೇಳೆ ಅಕ್ರಮವಾಗಿ ಕಾಡಿಗೆ ನುಗ್ಗುವ ಬೇಟೆಗಾರರು, ಮರಗಳ್ಳರು ಹಾಗೂ ಇತರ ಅಕ್ರಮ ಚಟುವಟಿಕೆಗಳ ಮೇಲೂ ನಿಗಾ ಇಡಲು ಇದು ಅತ್ಯಂತ ಪರಿಣಾಮಕಾರಿ ಸಾಧನ. ಅರಣ್ಯ ಇಲಾಖೆಯ ಕಾರ್ಯಕ್ಷಮತೆ ಹೆಚ್ಚುವುದರ ಜೊತೆಗೆ ಅಕ್ರಮ ಚಟುವಟಿಕೆಗಳನ್ನು ತಡೆಯುವಲ್ಲಿಯೂ ಈ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ.

ಕರ್ನಾಟಕದಲ್ಲಿಯೂ ಉತ್ತರ ಕನ್ನಡ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಾನವ-ಆನೆ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಳೆ ನಾಶ, ಮನೆಗಳಿಗೆ ಹಾನಿ ಹಾಗೂ ಪ್ರಾಣಹಾನಿಯ ಘಟನೆಗಳು ಆಗಾಗ ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಒಡಿಶಾದ ಥರ್ಮಲ್ ಡ್ರೋನ್ ಮಾದರಿಯನ್ನು ಕರ್ನಾಟಕವೂ ಅಳವಡಿಸಿಕೊಂಡರೆ ಅರಣ್ಯ ಇಲಾಖೆ, ರೈತರು ಹಾಗೂ ಗ್ರಾಮಸ್ಥರಿಗೆ ಹೆಚ್ಚಿನ ಭದ್ರತೆ ಒದಗಿಸಲು ಸಾಧ್ಯವಾಗಬಹುದು.

ಆಧುನಿಕ ತಂತ್ರಜ್ಞಾನವನ್ನು ಕೇವಲ ನಗರಗಳ ಅಭಿವೃದ್ಧಿಗೆ ಮಾತ್ರವಲ್ಲದೆ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಗೆ ಬಳಸಿದಾಗ ಅದರ ನಿಜವಾದ ಮೌಲ್ಯ ಗೊತ್ತಾಗುತ್ತದೆ. ಒಡಿಶಾದ ಥರ್ಮಲ್ ಡ್ರೋನ್ ಪ್ರಯೋಗವು ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡಿ ಸಹಬಾಳ್ವೆಗೆ ಹೊಸ ದಾರಿಯನ್ನು ತೋರಿಸುತ್ತಿದೆ ಮತ್ತು, ಭವಿಷ್ಯದಲ್ಲಿ ದೇಶದ ಇತರ ರಾಜ್ಯಗಳಿಗೂ ಇದು ಅನುಕರಣೀಯ ಮಾದರಿಯಾಗುವ ಎಲ್ಲ ಸಾಧ್ಯತೆಗಳಿವೆ.

– ಸೌಪರ್ಣಿಕಾ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share