ಗ್ರಾಮೀಣ ಶಾಲೆಯಲ್ಲೇ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ ಗಮನಾರ್ಹ ಸಾಧನೆ
ಯಲ್ಲಾಪುರ: ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ಸಿಗುವುದಿಲ್ಲ ಎಂಬ ಭಾವನೆಗೆ ಸವಾಲೊಡ್ಡಿದ ವಿದ್ಯಾರ್ಥಿನಿ ದಿಶಾ ಪ್ರಮೋದ್ ಹೆಬ್ಬಾರ್, ಸ್ಥಳೀಯ ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಪಡೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ತಾಲೂಕು ಮಟ್ಟದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿಶಾ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ದಿಶಾ ಪ್ರಾಥಮಿಕ ಶಿಕ್ಷಣವನ್ನು ಕಳಚೆ ಶಾಲೆಯಲ್ಲಿ ಪೂರ್ಣಗೊಳಿಸಿದ್ದಳು. ನಂತರ ಕಳಚೆಯ ಪ್ರೌಢಶಾಲೆ ಮುಚ್ಚಿದ ಕಾರಣ ವಜ್ರಳ್ಳಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕಾಯಿತು. ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಟರೆ ಸಂಜೆ 7 ಗಂಟೆಯ ನಂತರವೇ ಮನೆ ತಲುಪುವಂತಹ ಪರಿಸ್ಥಿತಿ ಇದ್ದರೂ ಓದಿನ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳಲಿಲ್ಲ.
ಗ್ರಾಮದ ಸಮಾನ ಮನಸ್ಕರು ಇಬ್ಬರು ವಿದ್ಯಾರ್ಥಿಗಳಿಗಾಗಿ ಶಾಲಾ ವಾಹನ ವ್ಯವಸ್ಥೆ ಮಾಡಿ, ಅದರ ವೆಚ್ಚವನ್ನೂ ಭರಿಸಿದ್ದರಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಯಿತು. ಸಮಯದ ಅಭಾವ, ಸಮಯ ವ್ಯಯಿಸುವ ಪ್ರಯಾಣ ಸೇರಿದಂತೆ ಹಲವು ಸವಾಲುಗಳನ್ನು ಮೀರಿ ದಿಶಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಸ್ಪೂರ್ತಿಯಾಗಿದ್ದಾಳೆ.
ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಣ ಪಡೆದರೆ ಸಂಸ್ಕೃತಿ, ಸಂಸ್ಕಾರ, ಊರಿನ ಬಗ್ಗೆ ಅಭಿಮಾನ ಹಾಗೂ ಜೀವನ ಮೌಲ್ಯಗಳು ಗಟ್ಟಿಯಾಗುತ್ತವೆ ಎಂಬ ಶ್ರೀ ಸೋಂದಾ ಸ್ವರ್ಣವಲ್ಲೀ ಶ್ರೀಗಳ ಆಶಯಕ್ಕೆ ದಿಶಾ ಹೆಬ್ಬಾರ್ ಸಾಧನೆ ಮತ್ತೊಂದು ಉದಾಹರಣೆಯಾಗಿದೆ.
ಪ್ರಸ್ತುತ ದಿಶಾ ಹೆಬ್ಬಾರ್ ವಿಶ್ವದರ್ಶನ ಕಾಲೇಜಿನಲ್ಲಿ ವಾಣಿಜ್ಯ (ಕಾಮರ್ಸ್) ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ಗುರಿಯಾಗಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗುವ ಕನಸನ್ನು ಹೊಂದಿದ್ದಾರೆ. ಗ್ರಾಮೀಣ ಭಾಗದಿಂದಲೇ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಬೇಕೆಂಬ ಅವರ ಸಂಕಲ್ಪಕ್ಕೆ ಪಾಲಕರಾದ ಪ್ರಮೋದ್ ಹೆಬ್ಬಾರ್-ಉಷಾ ಹೆಬ್ಬಾರ್, ಶಿಕ್ಷಕರು ಹಾಗೂ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.