ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಲ್ಲೇ ಅತ್ಯಂತ ಪ್ರಭಾವಶಾಲಿ ಮತ್ತು ಹೆಚ್ಚು ಭಯ-ಭಕ್ತಿ ಮೂಡಿಸುವ ಗ್ರಹವೆಂದರೆ ಅದು ಶನಿ. ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಶನಿ ಎಂದರೆ ಕೇವಲ ಕಷ್ಟ-ಕೋಟಲೆಗಳನ್ನು ನೀಡುವ ಗ್ರಹ ಎಂಬ ತಪ್ಪು ಕಲ್ಪನೆ ಆಳವಾಗಿ ಬೇರೂರಿದೆ. ಜಾತಕದಲ್ಲಿ ಶನಿಯ ದೆಸೆ ಅಥವಾ ಗೋಚಾರದ ಪ್ರಭಾವ ಆರಂಭವಾಗುತ್ತಿದೆ ಎಂದು ತಿಳಿದ ತಕ್ಷಣವೇ ದಿಗಿಲುಗೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ.
ಆದರೆ ವಾಸ್ತವದಲ್ಲಿ ಶನಿದೇವ ಯಾವುದೇ ಪಕ್ಷಪಾತವಿಲ್ಲದೆ ಕೇವಲ ನಮ್ಮ ಕರ್ಮಗಳ ಆಧಾರದ ಮೇಲೆ ಫಲ ನೀಡುವ ಬ್ರಹ್ಮಾಂಡದ ಮುಖ್ಯ ನ್ಯಾಯಾಧೀಶ ಅಥವಾ ಕರ್ಮಕಾರಕ. ಸತ್ಯ, ನ್ಯಾಯದ ಹಾದಿಯಲ್ಲಿ ನಡೆದು, ದಾನ-ಧರ್ಮ ಮಾಡುವ ಸತ್ಕರ್ಮಿಗಳಿಗೆ ಅಪಾರ ಯಶಸ್ಸು, ಸಂಪತ್ತು ಮತ್ತು ಕೀರ್ತಿಯನ್ನು ಕರುಣಿಸುವ ಈತ, ಮೋಹ, ಮತ್ಸರ, ವಂಚನೆ, ಅಹಂಕಾರ, ಮೋಸ ಹಾಗೂ ದುರ್ಬಲರನ್ನು ಪೀಡಿಸುವ ದುಷ್ಕರ್ಮಿಗಳಿಗೆ ಕಠಿಣ ಪಾಠಗಳನ್ನು ಕಲಿಸುತ್ತಾನೆ.
ನವಗ್ರಹಗಳಲ್ಲಿ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ದಾಟಲು ಸುಮಾರು ಎರಡೂವರೆ ವರ್ಷಗಳ ಸುದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ದೀರ್ಘಾವಧಿಯ ಚಲನೆಯಿಂದಾಗಿ ಮಾನವ ಜೀವನದ ಮೇಲೆ ಇದರ ಪ್ರಭಾವ ಅತ್ಯಂತ ಆಳವಾಗಿ ಮತ್ತು ದೀರ್ಘಕಾಲದವರೆಗೆ ಇರುತ್ತದೆ.
ಇಡೀ ರಾಶಿಚಕ್ರದ ಹನ್ನೆರಡು ರಾಶಿಗಳನ್ನು ಒಂದು ಸುತ್ತು ಬರಲು ಶನಿಗೆ ಸರಿಸುಮಾರು ಮೂವತ್ತು ವರ್ಷಗಳು ಬೇಕಾಗುತ್ತವೆ. ಜ್ಯೋತಿಷ್ಯದ ಪ್ರಕಾರ ಮಕರ ಮತ್ತು ಕುಂಭ ರಾಶಿಗಳು ಶನಿಯ ಸ್ವಂತ ಮನೆಗಳಾಗಿದ್ದು, ತುಲಾ ರಾಶಿಯಲ್ಲಿ ಶನಿಯು ಅತ್ಯಂತ ಬಲಿಷ್ಠನಾಗಿ ಉತ್ತಮ ಫಲಗಳನ್ನು ನೀಡುತ್ತಾನೆ. ಆದರೆ ಮೇಷ ರಾಶಿಯಲ್ಲಿ ಶನಿಯು ಅತ್ಯಂತ ದುರ್ಬಲನಾಗಿ ಕಷ್ಟಗಳನ್ನು ಹೆಚ್ಚಿಸುತ್ತಾನೆ.
ಮಾನವ ಜೀವನದಲ್ಲಿ ಶನಿಯ ಪ್ರಭಾವವು ಪ್ರಮುಖವಾಗಿ ಮೂರು ರೀತಿಯ ದೋಷಗಳ ರೂಪದಲ್ಲಿ ಎದುರಾಗುತ್ತದೆ. ಮೊದಲನೆಯದು ಸಾಡೇಸಾತಿ ಶನಿ. ಇದು ಒಬ್ಬ ವ್ಯಕ್ತಿಯ ಜನ್ಮ ರಾಶಿಯ ಹಿಂದಿನ ರಾಶಿ, ಜನ್ಮ ರಾಶಿ ಮತ್ತು ಮುಂದಿನ ರಾಶಿಯಲ್ಲಿ ಶನಿ ಸಂಚರಿಸುವ 7.5 ವರ್ಷಗಳ ಸುದೀರ್ಘ ಅವಧಿಯಾಗಿದೆ.
ಎರಡನೆಯದು ‘ಅರ್ಧಾಷ್ಟಮ ಶನಿ’, ಅಂದರೆ ಜನ್ಮ ರಾಶಿಯಿಂದ 4ನೇ ಮನೆಯಲ್ಲಿ ಶನಿ ಇರುವ ಅವಧಿಯಾಗಿದ್ದು, ಇದು ಕೌಟುಂಬಿಕ ಕಲಹ ಮತ್ತು ಮಾನಸಿಕ ನೆಮ್ಮದಿಯ ಕೊರತೆಯನ್ನು ಉಂಟುಮಾಡಬಹುದು.
ಮೂರನೆಯದು ‘ಅಷ್ಟಮ ಶನಿ’, ಅಂದರೆ ಜನ್ಮ ರಾಶಿಯಿಂದ 8ನೇ ಮನೆಯಲ್ಲಿ ಶನಿ ಇರುವ ಅತ್ಯಂತ ಕಠಿಣ ಅವಧಿಯಾಗಿದ್ದು, ಈ ಸಮಯದಲ್ಲಿ ಅಪಘಾತಗಳು, ಆರೋಗ್ಯದ ಏರುಪೇರು ಮತ್ತು ಉದ್ಯೋಗದಲ್ಲಿ ಹಠಾತ್ ನಷ್ಟಗಳು ಹೀಗೆಯೇ ತೊಂದರೆಗಳು ಎದುರಾಗಬಹುದು. ಈ ದೋಷಗಳ ಪ್ರಭಾವದಿಂದಾಗಿ ಮನುಷ್ಯನ ಜೀವನದಲ್ಲಿ ಹಠಾತ್ ಬದಲಾವಣೆಗಳು ಎದುರಾಗುತ್ತವೆ ಮತ್ತು ನಾವು ಅಂದುಕೊಂಡ ಕೆಲಸಗಳು ಸುಲಭವಾಗಿ ಕೈಗೂಡದೆ ಪ್ರತಿಯೊಂದಕ್ಕೂ ಕಠಿಣ ಪರಿಶ್ರಮ ಪಡಬೇಕಾಗುತ್ತದೆ.
ಆದರೆ ನಮ್ಮ ಜೀವನದಲ್ಲಿ ಶನಿಯ ಫ್ರಭಾವದ ಅವಧಿಯನ್ನು ಕೇವಲ ಕಷ್ಟ ಎಂದು ಭಾವಿಸುವ ಬದಲು, ಅದನ್ನು ವ್ಯಕ್ತಿತ್ವ ವಿಕಸನದ ಹಂತಗಳೆಂದು ತಿಳಿಯುವುದು ಉತ್ತಮ. ಮೊದಲ ಎರಡುವರೆ ವರ್ಷಗಳ ಹಂತವು ಚಿನ್ನವನ್ನು ಬೆಂಕಿಯಲ್ಲಿ ಕಾಯಿಸುವ ಪ್ರಕ್ರಿಯೆಯಂತಿದ್ದು, ಈ ಸಮಯದಲ್ಲಿ ಮನುಷ್ಯನ ಭ್ರಮೆಗಳು, ತಪ್ಪು ಕಲ್ಪನೆಗಳು ಮತ್ತು ತಪ್ಪಾದ ಸಂಬಂಧಗಳನ್ನು ಶನಿ ದೂರ ಮಾಡುತ್ತಾನೆ.
ಈ ಪ್ರಕ್ರಿಯೆಯು ಮಾನಸಿಕ ಒತ್ತಡ, ಕಿರಿಕಿರಿ ಹಾಗೂ ಧನಹಾನಿ ಹೀಗೆಯೇ ಅನೇಕ ನೋವುಗಳನ್ನು ತರಬಹುದು. ಎರಡನೇ ಹಂತವು ಜನ್ಮ ರಾಶಿಯ ಮೇಲಿನ ಅವಧಿಯಾಗಿದ್ದು, ಇದು ಕಾದ ಚಿನ್ನಕ್ಕೆ ಸುತ್ತಿಗೆಯಿಂದ ಹೊಡೆದು ಆಕಾರ ನೀಡುವ ಹಂತವಾಗಿದೆ. ಇಲ್ಲಿ ದೈಹಿಕ ಆಲಸ್ಯ ಕಾಡಿದರೂ, ಅತಿಯಾದ ಕಠಿಣ ಪರಿಶ್ರಮದ ಮೂಲಕ ಶನಿಯು ನಮ್ಮನ್ನು ಭವಿಷ್ಯದ ದೊಡ್ಡ ಜವಾಬ್ದಾರಿಗಳಿಗೆ ಸಿದ್ಧಗೊಳಿಸುತ್ತಾನೆ.
ಇನ್ನು ಮೂರನೇ ಹಂತದಲ್ಲಿ ಕಷ್ಟಗಳು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತವೆ. ಈ ಹಂತದಲ್ಲಿ ವ್ಯಕ್ತಿಯು ಶುದ್ಧ ಚಿನ್ನವಾಗಿ ಹೊರಹೊಮ್ಮಿ, ಜೀವನದ ದೊಡ್ಡ ಪಾಠಗಳನ್ನು ಕಲಿತು ಪರಿಪೂರ್ಣನಾಗುತ್ತಾನೆ. ನಿರ್ಗಮಿಸುವ ಮುನ್ನ ಶನಿಯು ವ್ಯಕ್ತಿಗೆ ಸ್ಥಿರತೆ, ಕೀರ್ತಿ ಮತ್ತು ಅನುಭವದ ದೊಡ್ಡ ಸಂಪತ್ತನ್ನು ಕರುಣಿಸುತ್ತಾನೆ.
ಶನಿ ದೆಸೆಯ ಅವಧಿಯಲ್ಲಿ ಮನುಷ್ಯನು ಕಲಿಯುವ ಜೀವನದ ಪಾಠಗಳು ಅತ್ಯಂತ ಅಮೂಲ್ಯವಾದವು. ಯಶಸ್ಸು ಸುಲಭವಾಗಿ ಸಿಗುವುದಿಲ್ಲ ಮತ್ತು ಅದಕ್ಕೆ ನಿರಂತರ ಶಿಸ್ತು ಹಾಗೂ ಪರಿಶ್ರಮ ಬೇಕು ಎಂಬುದನ್ನು ಶನಿ ಮನಗಾಣಿಸುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ, ಸುಖದಲ್ಲಿದ್ದಾಗ ನಮ್ಮ ಜೊತೆಯಲ್ಲಿದ್ದು ಕಷ್ಟ ಬಂದಾಗ ದೂರ ಸರಿಯುವ ಆಪ್ತರ ನಿಜವಾದ ಬಣ್ಣವನ್ನು ಮತ್ತು ಕಷ್ಟದ ಸಮಯದಲ್ಲಿ ನಮ್ಮ ಜೊತೆ ನಿಲ್ಲುವ ನಿಜವಾದ ಹಿತೈಷಿಗಳನ್ನು ಶನಿ ನಮಗೆ ಪರಿಚಯಿಸುತ್ತಾನೆ.
ಜೀವನದಲ್ಲಿ ಎಲ್ಲವೂ ಇದ್ದರೂ ಅಹಂಕಾರ ಪಡಬಾರದು ಎಂಬ ಪಾಠವನ್ನು ಕಲಿಸಿ, ನಮ್ಮೊಳಗಿನ ಕಸವನ್ನು ಗುಡಿಸಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಾಯ ಮಾಡುತ್ತಾನೆ. ಯಾರು ಸತ್ಯದ ಹಾದಿಯಲ್ಲಿ ನಡೆಯುತ್ತಾರೋ ಮತ್ತು ಎಲ್ಲರನ್ನೂ ಗೌರವಿಸುತ್ತಾರೋ ಅವರ ಮೇಲೆ ಶನಿಯ ಪ್ರಭಾವವೂ ತಂತಾನೇ ಕಡಿಮೆಯಿರುತ್ತದೆ.
ಹಾಗೆಯೇ ಶನಿ ದೋಷದ ಪ್ರಭಾವವನ್ನು ತಗ್ಗಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಸರಳ ಮತ್ತು ಪ್ರಭಾವಶಾಲಿ ಪರಿಹಾರಗಳನ್ನು ಸೂಚಿಸಲಾಗಿದೆ. ಪ್ರತಿ ಶನಿವಾರ ಹನುಮಂತನ ಆರಾಧನೆ ಮಾಡುವುದು ಮತ್ತು ಹನುಮಾನ್ ಚಾಲೀಸಾ ಪಠಿಸುವುದು ಶನಿದೋಷಕ್ಕೆ ರಾಮಬಾಣವಾಗಿದೆ. ಶನಿವಾರ ಸಂಜೆ ದೇವಸ್ಥಾನದಲ್ಲಿ ಅಥವಾ ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಹಚ್ಚುವುದು, ಕಪ್ಪು ಎಳ್ಳು ಅಥವಾ ಕಪ್ಪು ಕಂಬಳಿಯನ್ನು ದಾನ ನೀಡುವುದು, ಅವರವರ ಶಕ್ತಿಗನುಗುಣವಾಗಿ ಬಡವರಿಗೆ, ಅನಾಥರಿಗೆ, ದೀನರಿಗೆ ಸಾಧ್ಯವಾದಷ್ಟು ಸಹಾಯವನ್ನು ಮಾಡಿದರೆ ಶನಿದೇವನು ಪ್ರಸನ್ನನಾಗುತ್ತಾನೆ.
ಇವೆಲ್ಲಕ್ಕಿಂತ ಮುಖ್ಯವಾಗಿ, ಸಮಾಜದಲ್ಲಿ ಎಲ್ಲರನ್ನೂ ಗೌರವದಿಂದ ನೋಡುವುದು, ವಿಶೇಷವಾಗಿ ಕಾಗೆಗಳಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುವುದು ಶನಿಯ ಪ್ರಭಾವವನ್ನು ಕಡಿಮೆಗೊಳಿಸುವ ಅತ್ಯಂತ ಸುಲಭವಾದ ಮಾರ್ಗವಾಗಿದೆ. ಒಟ್ಟಾರೆಯಾಗಿ, ಶನಿ ಎಂದರೆ ವಿನಾಶಕಾರಿಯಲ್ಲ, ಆತ ನಮ್ಮನ್ನು ಶುದ್ಧ ಚಿನ್ನದಂತೆ ಹೊಳೆಯುವಂತೆ ಮಾಡುವ ಕಠಿಣ ಗುರುವಾಗಿದ್ದಾನೆ.
ಇಷ್ಟೆಲ್ಲಾ ಓದಿದ ಮೇಲೆ ನಿಮಗೂ ಅನ್ನಿಸಬಹುದು, ಯಾವಾಗಲೂ ಒಳ್ಳೆಯದನ್ನು ಮಾಡುವವರಿಗೆ, ಒಳ್ಳೆ ಮಾರ್ಗದಲ್ಲೇ ನಡೆಯುವವರಿಗೆ ಕೆಟ್ಟದ್ದಾಗುತ್ತದೆ, ಕೆಟ್ಟದ್ದನ್ನೇ ಮಾಡಿ ಕಣ್ಮುಂದೆ ಓಡಾಡುವವರಿಗೆ ಏನೂ ಆಗದೇ ಚೆನ್ನಾಗಿಯೇ ಇರುತ್ತಾರಲ್ಲಾ ಎಂದು, ಆದರೆ ಸಮಯ, ಸಂದರ್ಭಗಳು ಯಾರ ಪರವಾಗಿರುತ್ತದೆಯೋ ಕೆಟ್ಟದ್ದನ್ನು ಮಾಡಿಯಾದರೂ ದಕ್ಕಿಸಿಕೊಂಡುಬಿಡಬಹುದು.
ಆದರೆ ಅದೇ ಸಮಯ ಕೆಟ್ಟಾಗ ಮಾಡಿದ ಕರ್ಮಗಳಿಗೆ ತಕ್ಕಂತೆ ಫಲಗಳನ್ನೂ ಅನುಭವಿಸಲೇಬೇಕಲ್ಲವೇ? ಆಗೋದಕ್ಕೆಲ್ಲಾ ಶನಿ ಮಹಾತ್ಮನನ್ನು ಕಾರಣ ಮಾಡಿದ್ರೂ ಶನಿ ಮಹಾತ್ಮ ಲೆಕ್ಕ ಚುಕ್ತಾ ಮಾಡದೇ ಬಿಡೋದಿಲ್ಲ..!
– ಸೌಪರ್ಣಿಕಾ.