Thursday, July 23, 2026
Join WhatsApp Group
HomeLocal Storyರಾತ್ರಿ ಹೊತ್ತಿನ ‘ಓಪನ್ ಬಾರ್‌’!

ರಾತ್ರಿ ಹೊತ್ತಿನ ‘ಓಪನ್ ಬಾರ್‌’!

ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಸುತ್ತ ಹೆಚ್ಚುತ್ತಿರುವ ಅಸಾಮಾಜಿಕ ಚಟುವಟಿಕೆಗಳಿಗೆ ಸಾರ್ವಜನಿಕರ ಆಕ್ರೋಶ

ಸಿಟಿಜನ್‌ ರಿಪೋರ್ಟರ್:‌ ವಿಶ್ವನಾಥ ಹೆಗಡೆ

ಶ್ರೀಮಾತಾ ಮೊಬೈಲ್ಸ್-ಶಿರಸಿ.

ಶಿರಸಿ: ನಗರದ ಪ್ರಮುಖ ಕ್ರೀಡಾ ಕೇಂದ್ರವಾಗಿರುವ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಪಕ್ಕದ ರಸ್ತೆ ಇದೀಗ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಶಿರಸಿ-ಹುಬ್ಬಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಕ್ರೀಡಾಂಗಣ ಹಗಲು ಹೊತ್ತಿನಲ್ಲಿ ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರಿಂದ ಕಂಗೊಳಿಸಿದರೆ, ರಾತ್ರಿ ಆಗುತ್ತಿದ್ದಂತೆ ಸಂಪೂರ್ಣ ವಿಭಿನ್ನವಾದ ಚಿತ್ರಣ ತೆರೆದುಕೊಳ್ಳುತ್ತದೆ.

ಸಮರ್ಪಕ ಬೀದಿ ದೀಪಗಳ ಕೊರತೆಯಿಂದ ರಸ್ತೆ ಕತ್ತಲಿನಿಂದ ಆವರಿಸಿಕೊಳ್ಳುತ್ತಿದ್ದು, ಇದೇ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಕೆಲವರು ವಾಹನಗಳಲ್ಲಿ ಬಂದು ರಸ್ತೆ ಬದಿಯಲ್ಲೇ ಮದ್ಯ ಸೇವನೆ ನಡೆಸುತ್ತಿದ್ದಾರೆ.

ರಸ್ತೆ ಬದಿಯಲ್ಲಿ ಬಿದ್ದಿರುವ ಖಾಲಿ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಗ್ಲಾಸ್‌ಗಳು ಹಾಗೂ ಕಸದ ರಾಶಿ ಸ್ವಾಗತಿಸುತ್ತದೆ.

ರಾತ್ರಿ ವೇಳೆಯಲ್ಲಿ ಜೋರಾಗಿ ಕೂಗಾಟ, ವಾಹನಗಳ ಗದ್ದಲ ಹಾಗೂ ಅಸಭ್ಯ ವರ್ತನೆಗಳಿಂದ ಮಹಿಳೆಯರು ಮತ್ತು ಹಿರಿಯರು ಈ ರಸ್ತೆಯಲ್ಲಿ ಓಡಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಂದರ್ಭಗಳಲ್ಲಿ ಯುವಕರು ಗುಂಪು ಸೇರಿ ತಡರಾತ್ರಿ ತನಕ ಕಾಲ ಕಳೆಯುತ್ತಿರುವುದೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಹಾಗೆಂದು ಇವರಾರೂ ಅನಕ್ಷರಸ್ಥರೋ, ಬೇರೆ ಪ್ರದೇಶದವರೋ ಅಲ್ಲ. ಇದೇ ಮಾರ್ಗವಾಗಿ ಬೇರೆ ಬೇರೆ ಗ್ರಾಮೀಣ ಪ್ರದೇಶಕ್ಕೆ ತೆರಳುವ ಪುಂಡರೊಂದಿಗೆ ನಗರದ ಅನಾಗರಿಕರೂ ಸೇರಿ ಇಲ್ಲಿನ ವಾತಾವರಣವನ್ನೇ ಹದಗೆಡಿಸುತ್ತಿದ್ದಾರೆ.

ಪಟ್ಟಣದ ಪ್ರಮುಖ ಕ್ರೀಡಾಂಗಣದ ಸುತ್ತ ಇಂತಹ ವಾತಾವರಣ ನಿರ್ಮಾಣವಾಗಿರುವುದು ಕ್ರೀಡಾಪಟುಗಳ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಬೇಸರಕ್ಕೆ ಕಾರಣವಾಗಿದೆ. ರಸ್ತೆ ಭಾಗದಲ್ಲಿ ಸಮರ್ಪಕ ಬೀದಿ ದೀಪ ಅಳವಡಿಕೆ, ರಾತ್ರಿ ಪೊಲೀಸ್ ಗಸ್ತು ಹೆಚ್ಚಳ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ನಗರಸಭೆ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಾದ ಪ್ರದೇಶವೇ ಇಂತಹ ಅನೈತಿಕ ಚಟುವಟಿಕೆಗಳಿಗೆ ವೇದಿಕೆಯಾಗುತ್ತಿರುವ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share