Saturday, June 13, 2026
HomeLocal Newsನದಿ ತಿರುವು ಯೋಜನೆಯಿಂದ ಯಾವ ಪ್ರಯೋಜನವೂ ಇಲ್ಲ

ನದಿ ತಿರುವು ಯೋಜನೆಯಿಂದ ಯಾವ ಪ್ರಯೋಜನವೂ ಇಲ್ಲ

ಬೇಡ್ತಿ-ಅಘನಾಶಿನಿ ಯೋಜನೆ ವಿರುದ್ಧ ಸ್ವರ್ಣವಲ್ಲೀ ಶ್ರೀಗಳ ಎಚ್ಚರಿಕೆ

ಯಲ್ಲಾಪುರ: ಈ ಹೋರಾಟ ಎಷ್ಟು ದಿನ ನಡೆದೀತು ಎಂಬ ಭಾವನೆ ಸರ್ಕಾರಕ್ಕಿದೆ. ಈ ಹೋರಾಟ ಸೊರಗದೆ ಗಟ್ಟಿಯಾಗಬೇಕು. ನಾವು ಯಾರಿಗೂ ಕಲ್ಲು ಹೊಡೆಯುವುದಿಲ್ಲ, ಘೇರಾವ್ ಹಾಕುವುದಿಲ್ಲ. ನಮ್ಮದು ಸಾತ್ವಿಕ ಹೋರಾಟ. ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯನ್ನು ಮಾಡಬೇಕೋ ಬೇಡವೋ ಎಂಬ ಡೋಲಾಯಮಾನ ಸ್ಥಿತಿಯಲ್ಲಿ ಸರ್ಕಾರವಿದೆ. ನಮ್ಮ ಒತ್ತಡ ಹೆಚ್ಚಾದರೆ ಸರ್ಕಾರ ಬಾಗುತ್ತದೆ. ಸಕಾಲದಲ್ಲಿ ಒತ್ತಡ ಹೇಳಿದರೆ ಯೋಜನೆಯನ್ನು ತಡೆಯಬಹುದು ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ವತಿಯಿಂದ ತಾಲೂಕಿನ ಬೇಡ್ತಿ ಸೇತುವೆಯ ಬಳಿ ಆಯೋಜಿಸಿದ್ದ ವೃಕ್ಷಾರೋಪಣ ಅಭಿಯಾನ, ಹಸಿರು ಸಮಾರಂಭ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ನಾವು ನೆಟ್ಟ ಗಿಡ ಮುಳುಗಬಾರದು, ಅದು ಹೆಮ್ಮರವಾಗಿ ಬೆಳೆಯಬೇಕು ಎಂಬುದು ನಮ್ಮ ಆಶಯ. ಗಂಗಾವಳಿ ನದಿ ಸಮುದ್ರ ಸೇರುವವರೆಗೂ ಎಲ್ಲ ಸ್ಥಳಗಳಲ್ಲೂ ಈ ಕಾರ್ಯ ನಡೆಯಬೇಕು.ಈ ನದಿ ತಿರುವು ಯೋಜನೆಯಿಂದ ಯಾವುದೇ ಪ್ರಯೋಜನ ಇಲ್ಲ. ಇದನ್ನು ವಿರೋಧಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯ.  ನಮ್ಮ ಈ ಹೋರಾಟ ನಿರಂತರವಾಗಿ ನಡೆಯಬೇಕು ಎಂದರು.

ಪ್ರಾಸ್ತಾವಿಕವಾಗಿ ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ  ವಿ.ಎನ್.‌ ಹೆಗಡೆ ಬೊಮ್ನಳ್ಳಿ ಮಾತನಾಡಿ, ಬೇಡ್ತಿ ನದಿಯ ತಟ ಈ ಹಿಂದೆಯೂ ಕೂಡ ಅನೇಕ ಹೋರಾಟಗಳ ಉಗಮ ಸ್ಥಾನವಾಗಿದೆ. 1992ರಲ್ಲಿ ಬೇಡ್ತಿ ವಿರೋಧಿ ಹೋರಾಟ ಮಾಡಿದಾಗಲೂ ಈ ಜಾಗ ನೆಲೆಯಾಗಿದೆ. ಈ ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂದು ಹೋರಾಟ ಮಾಡಲು ಪುನಃ ಈ ಜಾಗದಲ್ಲಿ ಸೇರಿದ್ದೇವೆ. ಸರ್ಕಾರ ಯಾವಾಗ ಬೇಕಾದರೂ ಯೋಜನೆಯನ್ನು ಪುನಃ ಕೈಗೆತ್ತಿಕೊಳ್ಳಬಹುದು. ನಾವೆಲ್ಲರೂ ನಿರಂತರವಾಗಿ ಎಚ್ಚರಿಕೆ ವಹಿಸಬೇಕು ಎಂದರು.

ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಬೇಡ್ತಿ ಹೋರಾಟ ನಿರಂತರ ತಪಸ್ಸು. ಶ್ರೀಗಳೇ ಇಂತಹ ಹೋರಾಟದ ನೇತೃತ್ವ ವಹಿಸುತ್ತಿರುವುದರಿಂದ ಸರ್ಕಾರದ ಮಾರಕ ಯೋಜನೆಗಳು ಹಿಂದೆ ಸರಿಯುತ್ತಿವೆ. ಯಲ್ಲಾಪುರಕ್ಕೆ ನೀರು ಪೂರೈಸುವ ಯೋಜನೆಯೇ ಯಶಸ್ವಿಯಾಗಿಲ್ಲ. ಇನ್ನು ನದಿ ತಿರುವು ಯೋಜನೆ ಯಶಸ್ವಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಜಾರಿಯಾದ ಯೋಜನೆಗಳಿಂದ ಲಕ್ಷಾಂತರ ಹೆಕ್ಟರ್ ಕಾಡು ನಾಶವಾಗಿದೆ. ಬೇಡ್ತಿ ತಿರುವು ಜಾರಿಯಾಗಿದ್ದೇ ಆದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಸಮಿತಿಯ ಇನ್ನೋರ್ವ ಉಪಾಧ್ಯಕ್ಷ, ಎಂಎಲ್‌ಸಿ ಶಾಂತಾರಾಮ ಸಿದ್ದಿ ಮಾತನಾಡಿ, ಯೋಜನೆಗಳನ್ನು ಮಾಡುವಾಗ ಸರ್ಕಾರ, ವಿಜ್ಞಾನಿಗಳು, ಜನ ಪ್ರತಿನಿಧಿಗಳ ಸಮನ್ವಯ ಇಲ್ಲದಿದ್ದರೆ ಇಂತಹ ಅನಾಹುತಕಾರಿ ಯೋಜನೆಗಳು ಬರುತ್ತವೆ. ಏನಾದರಾಗಲಿ, ನನಗೇಕೆ ಎಂಬ ಮನಸ್ಥಿತಿಯ ಜನಪ್ರತಿನಿಧಿಗಳೂ ಇದ್ದಾರೆ. ಸ್ವಾಮೀಜಿಯವರ ನೇತೃತ್ವದ ಹೋರಾಟಕ್ಕೆ ಸೋಲಿಲ್ಲ. ಜಿಲ್ಲೆಯ ಪರಿಸರ ವಿರೋಧಿ ಯೋಜನೆಗಳು ಬಂದರೆ ಒಗ್ಗಟ್ಟಿನ ಹೋರಾಟ ಮಾಡೋಣ. ನಮ್ಮ ಬದುಕಿಗಾಗಿ ಮಾಡಲೇಬೇಕಾದ ಹೋರಾಟಕ್ಕೆ ಎಂದಿಗೂ ಬೆಂಬಲವಿದೆ ಎಂದರು.

ಇದೇ ಸಂದರ್ಭದಲ್ಲಿ ಸಹಿ ಚಳವಳಿಯ ಬಗ್ಗೆ ಅನಂತ ಹೆಗಡೆ ಹುಳಗೋಳ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಬೇಡ್ತಿ ಸೇತುವೆಯ ಬಳಿ ಶ್ರೀ ಸ್ವರ್ಣವಲ್ಲೀ ಶ್ರೀಗಳು ಗಿಡ ನೆಟ್ಟು ಹಸಿರು ಪ್ರತಿಜ್ಞೆಗೈದರು.

ಅಭಿಯಾನದ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಶ್ರೀಲತಾ ರಾಜೀವ್ ಹೆಗಡೆ ಪರಿಸರ ಗೀತೆ ಹಾಡಿದರು. ನಾಗೇಶ ಸುಬ್ರಾಯ ಮಳಲಗಾಂವ ಶ್ರೀಗಳಿಗೆ ಫಲ ಸಮರ್ಪಣೆಗೈದರು. ಸುಬ್ಬಣ್ಣ ಉದ್ದಾಬೈಲ ವಂದಿಸಿದರು. ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಾತೃ ಮಂಡಳಿಯ ಮಾತೆಯರು, ಗ್ರಾಮಸ್ಥರು, ಪರಿಸರಾಸಕ್ತರು ಪಾಲ್ಗೊಂಡಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share