ನಮ್ಮೊಳಗಿನ ಬಂಧನಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ!
ಆಗಸ್ಟ್ 15 ಎಂದಾಕ್ಷಣ ನಮ್ಮ ಕಣ್ಣ ಮುಂದೆ ತ್ರಿವರ್ಣ ಧ್ವಜ, ರಾಷ್ಟ್ರಗೀತೆ, ಸ್ವಾತಂತ್ರ್ಯೋತ್ಸವದ ಸಂಭ್ರಮ, ದೇಶಭಕ್ತಿ ಗೀತೆಗಳು, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು ನೆನಪಾಗುತ್ತವೆ.
1947ರ ಆಗಸ್ಟ್ 15ರಂದು ಭಾರತ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಿತು. ಆ ದಿನಕ್ಕಾಗಿ ಅದೆಷ್ಟೋ ಜನ ತಮ್ಮ ಬದುಕನ್ನೇ ತ್ಯಾಗ ಮಾಡಿದರು. ಎಷ್ಟೋ ಕುಟುಂಬಗಳು ನೋವು ಅನುಭವಿಸಿದವು. ಅನೇಕರು ಜೈಲು ಸೇರಿದರು, ಹೋರಾಡಿದರು, ಪ್ರಾಣ ಕಳೆದುಕೊಂಡರು. ಅವರ ತ್ಯಾಗದ ಫಲವಾಗಿ ನಾವು ಇಂದು ಸ್ವತಂತ್ರ ದೇಶದಲ್ಲಿ ಬದುಕುತ್ತಿದ್ದೇವೆ. ಇದೆಲ್ಲಾ ಎಲ್ಲರಿಗೂ ತಿಳಿದ ವಿಷಯವೇ!
ಆದರೆ ಆಗಸ್ಟ್ 15ರಂದು ಧ್ವಜವನ್ನು ಹಾರಿಸುವಾಗ ನಮ್ಮನ್ನು ನಾವೇ ಒಂದು ಪ್ರಶ್ನೆ ಕೇಳಿಕೊಳ್ಳಬೇಕಿದೆ. ಸ್ವಾತಂತ್ರ್ಯ ಎಂದರೆ ಕೇವಲ ಬ್ರಿಟಿಷರಿಂದ ಮುಕ್ತಿ ಪಡೆದ ದಿನವೇ? ದೇಶಕ್ಕೇನೋ ಸ್ವಾತಂತ್ರ್ಯ ಸಿಕ್ಕಿತು. ಆದರೆ ನಮ್ಮ ಬದುಕಿನಲ್ಲಿ ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವಾ?
ಇದು ಸ್ವಲ್ಪ ವಿಚಿತ್ರವಾದ ಪ್ರಶ್ನೆ ಎನ್ನಿಸಬಹುದು! ಆದರೆ ಒಮ್ಮೆ ನಮ್ಮ ಬದುಕಿನ ಕಡೆಗೆ ತಿರುಗಿ ನೋಡಿದರೆ ಅದರ ನಿಜವಾದ ಅರ್ಥ ತಿಳಿಯುತ್ತದೆ.
ಇಂದು ನಾವು ಎಲ್ಲಿಗೆ ಹೋಗಬೇಕು, ಏನು ಓದಬೇಕು, ಯಾವ ಕೆಲಸ ಮಾಡಬೇಕು, ಯಾರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು ಎಂಬುದನ್ನು ಬಹುತೇಕ ನಾವೇ ನಿರ್ಧರಿಸಬಹುದು. ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ನಮ್ಮ ಇಷ್ಟದ ಬದುಕನ್ನು ಕಟ್ಟಿಕೊಳ್ಳುವ ಅವಕಾಶವಿದೆ. ಇವೆಲ್ಲವೂ ಸ್ವಾತಂತ್ರ್ಯದ ಭಾಗವೇ.
ಆದರೆ ಕೆಲವೊಮ್ಮೆ ನಮ್ಮ ಬದುಕಿನ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದೇ ಇಲ್ಲ! ʻಜನರೆಲ್ಲಾ ಏನು ಅಂದುಕೊಳ್ಳುತ್ತಾರೋ…ʼ ಎಂಬ ಒಂದು ಮಾತೇ ನಮ್ಮನ್ನು ತಡೆದುಬಿಡುತ್ತದೆ.
ಇಷ್ಟವಿಲ್ಲದ ಕೆಲಸವನ್ನು ಮಾಡುತ್ತೇವೆ. ಇಷ್ಟವಿಲ್ಲದ ಸಂಬಂಧವನ್ನು ಬೆನ್ನಿಗೆ ಕಟ್ಟಿಕೊಂಡು ಎಳೆದುಕೊಂಡು ಹೋಗುತ್ತೇವೆ. ನಮಗೆ ಇಷ್ಟವಾದ ದಾರಿಯಲ್ಲಿ ನಡೆಯಲು ಮನಸ್ಸಿದ್ದರೂ, ಜನರೆಲ್ಲಾ ಏನು ಹೇಳಬಹುದು ಎಂಬ ಭಯದಿಂದ ಹಿಂದೆ ಸರಿಯುತ್ತೇವೆ. ಮತ್ತೊಬ್ಬರ ಬದುಕಿನೊಂದಿಗೆ ನಮ್ಮ ಬದುಕನ್ನು ಹೋಲಿಸಿಕೊಂಡು, ನಮ್ಮನ್ನೇ ನಾವು ಕಡಿಮೆ ಎಂದುಕೊಳ್ಳುತ್ತೇವೆ.
ಹಾಗಾದರೆ ಯಾವುದನ್ನು ನಿಜವಾದ ಸ್ವಾತಂತ್ರ್ಯ ಎಂದುಕೊಳ್ಳಬೇಕು? ಸ್ವಾತಂತ್ರ್ಯ ಎಂದರೆ ಮನಸ್ಸಿಗೆ ಬಂದದ್ದನ್ನೆಲ್ಲ ಮಾಡುವುದಲ್ಲ. ಜವಾಬ್ದಾರಿಯಿಲ್ಲದೆ ಬದುಕುವುದೂ ಅಲ್ಲ. ಸರಿ-ತಪ್ಪುಗಳು ಯಾವುದೆಂದು ತಿಳಿದು, ಅದರ ಪರಿಣಾಮಗಳನ್ನು ಒಪ್ಪಿಕೊಂಡು, ನಮ್ಮ ಬದುಕಿನ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವ ಸಾಮರ್ಥ್ಯವೇ ನಿಜವಾದ ಸ್ವಾತಂತ್ರ್ಯ.
ಕೆಲವೊಮ್ಮೆ ಹಣದ ಹಿಂದೆ ಓಡುವುದೇ ಬದುಕು ಎಂದುಕೊಳ್ಳುತ್ತೇವೆ. ಇನ್ನೊಮ್ಮೆ ಹೆಸರು, ಸ್ಥಾನಮಾನ, ಗೌರವಕ್ಕಾಗಿ ನಮ್ಮ ನೆಮ್ಮದಿಯನ್ನೇ ಬಲಿಕೊಡುತ್ತೇವೆ. ಮತ್ತೊಬ್ಬರು ನಮ್ಮನ್ನು ಹೊಗಳಬೇಕು ಎಂಬ ಆಸೆ, ಎಲ್ಲರೂ ನಮ್ಮನ್ನು ಒಪ್ಪಿಕೊಳ್ಳಬೇಕು ಎಂಬ ನಿರೀಕ್ಷೆ, ಯಾರೂ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂಬ ಬಯಕೆ—ಇವೆಲ್ಲವೂ ನಿಧಾನವಾಗಿ ನಮ್ಮ ಮನಸ್ಸನ್ನು ಬಂಧಿಸುತ್ತವೆ.
ಇನ್ನೂ ಕೆಲವರು ತಮ್ಮ ಜೀವನವನ್ನು ಮತ್ತೊಬ್ಬರ ಅಭಿಪ್ರಾಯಕ್ಕೆ ಒಪ್ಪಿಸಿಬಿಡುತ್ತಾರೆ. ʻಅವರು ಹೀಗೆ ಹೇಳಿದರುʼ, ʻಇವರು ಹಾಗೆ ಅಂದುಕೊಳ್ಳುತ್ತಾರೆʼ ಎನ್ನುವುದರಲ್ಲೇ ಬದುಕು ಸಾಗುತ್ತದೆ. ತಮ್ಮ ಮನಸ್ಸಿಗೆ ಏನು ಬೇಕು ಎನ್ನುವುದನ್ನು ಕೇಳಿಕೊಳ್ಳುವುದನ್ನೇ ಮರೆತುಬಿಡುತ್ತಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನವನ್ನು ಪ್ರತಿವರ್ಷ ಆಚರಿಸುವ ನಾವು, ನಮ್ಮೊಳಗಿನ ಇಂತಹ ಬಂಧನಗಳ ಬಗ್ಗೆ ಒಮ್ಮೆ ಯೋಚಿಸಬೇಕಲ್ಲವೇ? ನಮ್ಮನ್ನು ಪ್ರೀತಿಸುವವರನ್ನು ಪ್ರೀತಿಸೋಣ. ಸಂಬಂಧಗಳನ್ನು ಗೌರವಿಸೋಣ. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸೋಣ. ಆದರೆ ಅದಕ್ಕಾಗಿ ನಮ್ಮ ವ್ಯಕ್ತಿತ್ವವನ್ನೇ ಕಳೆದುಕೊಳ್ಳಬೇಕಾಗಿಲ್ಲ. ಮತ್ತೊಬ್ಬರನ್ನು ಗೌರವಿಸುವುದಕ್ಕೂ, ನಮ್ಮನ್ನು ನಾವು ಕಳೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ.
ಹಾಗೆಯೇ ಸ್ವಾತಂತ್ರ್ಯ ಎಂದರೆ ಯಾರನ್ನೂ ಲೆಕ್ಕಿಸದೆ ಬದುಕುವುದಲ್ಲ. ನಮ್ಮ ಸ್ವಾತಂತ್ರ್ಯದಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಕೂಡ ಅಷ್ಟೇ ಮುಖ್ಯ. ನಾವು ಮಾತನಾಡುವ ಹಕ್ಕು ಹೊಂದಿದ್ದೇವೆ. ಹಾಗೆಯೇ ಮತ್ತೊಬ್ಬರ ಮಾತನ್ನು ಕೇಳುವ ಜವಾಬ್ದಾರಿಯೂ ನಮ್ಮ ಮೇಲಿದೆ.
1947ರಲ್ಲಿ ನಮ್ಮ ದೇಶಕ್ಕೆ ದೊರೆತ ಸ್ವಾತಂತ್ರ್ಯ ಒಂದು ದೊಡ್ಡ ಸಾಧನೆ. ಆದರೆ ಆ ಸ್ವಾತಂತ್ರ್ಯದ ಅರ್ಥವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದು. ಪ್ರತಿದಿನ ನಮ್ಮ ನಡೆ-ನುಡಿಗಳಲ್ಲಿ ಸ್ವಾತಂತ್ರ್ಯದ ಮೌಲ್ಯವನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ.
ಈ ಆಗಸ್ಟ್ 15ರಂದು ತ್ರಿವರ್ಣ ಧ್ವಜವನ್ನು ನೋಡುತ್ತಾ ಒಂದು ಕ್ಷಣ ನಮ್ಮನ್ನೇ ಕೇಳಿಕೊಳ್ಳೋಣ. ʻನನ್ನ ಭವ್ಯ ಭಾರತ ಸ್ವತಂತ್ರವಾಗಿದೆ. ಆದರೆ ನನ್ನ ಮನಸ್ಸು ಸ್ವತಂತ್ರವಾಗಿದೆಯೇ?ʼ
ಯಾರ ಭಯವೂ ಇಲ್ಲದೆ ಸತ್ಯವನ್ನು ಒಪ್ಪಿಕೊಳ್ಳುವಷ್ಟು, ತಪ್ಪಾದರೆ ತಿದ್ದಿಕೊಳ್ಳುವಷ್ಟು, ಇತರರ ಮಾತನ್ನು ಗೌರವಿಸುತ್ತಲೇ ನಮ್ಮ ದಾರಿಯನ್ನು ಆಯ್ಕೆ ಮಾಡಿಕೊಳ್ಳುವಷ್ಟು, ಕಳೆದುಕೊಂಡರೂ ಕುಸಿದುಹೋಗದೆ ಮತ್ತೆ ಎದ್ದು ನಿಲ್ಲುವಷ್ಟು ನಮ್ಮ ಮನಸ್ಸು ಸ್ವತಂತ್ರವಾಗಿದೆಯೇ?
ಆದ್ದರಿಂದ, ಈ ಆಗಸ್ಟ್ 15ರಂದು ಧ್ವಜಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ನಮ್ಮೊಳಗಿನ ಭಯ, ಅತಿಯಾದ ನಿರೀಕ್ಷೆ, ಸಮಾಜದ ಅನಗತ್ಯ ಒತ್ತಡ ಮತ್ತು ನಮ್ಮನ್ನು ನಾವು ಕಟ್ಟಿಹಾಕಿಕೊಂಡಿರುವ ಬಂಧನಗಳಿಂದಲೂ ಸ್ವಲ್ಪ ಸ್ವಲ್ಪವಾಗಿ ಹೊರಬರಲು ಪ್ರಯತ್ನಿಸೋಣ. ದೇಶಕ್ಕೆ ಸಿಕ್ಕ ಸ್ವಾತಂತ್ರ್ಯವನ್ನು ಸಂಭ್ರಮಿಸೋಣ. ನಮ್ಮ ಮನಸ್ಸಿನ ಸ್ವಾತಂತ್ರ್ಯವನ್ನು ಅರಿತುಕೊಳ್ಳೋಣ.
ಸ್ವಾತಂತ್ರ್ಯವನ್ನು ಅನುಭವಿಸುವುದರ ಜೊತೆಗೆ, ಅದಕ್ಕೆ ತಕ್ಕ ಜವಾಬ್ದಾರಿಯನ್ನೂ ಮರೆಯದಿರೋಣ. ಅದೇ ಸ್ವಾತಂತ್ರ್ಯೋತ್ಸವದ ನಿಜವಾದ ಅರ್ಥ!
– ಸಂಗೀತಾ ಭಟ್.
ಕೆನರಾ ನೆಕ್ಸ್ಟ್