ಸಾಮಾಜಿಕ ಜಾಲತಾಣಗಳಿಲ್ಲದೆ ಇಂದು ನಮಗೆ ಬದುಕುವುದೇ ಕಷ್ಟ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ ಮತ್ತು ಯೂಟ್ಯೂಬ್ಗಳ ಮೂಲಕ ಜಗತ್ತಿನೊಂದಿಗೆ ಸಂಪರ್ಕದಲ್ಲಿರುತ್ತೇವೆ. ಅಭಿಪ್ರಾಯ ಹಂಚಿಕೊಳ್ಳುವುದು, ಮಾಹಿತಿ ಪಡೆಯುವುದು, ಪ್ರತಿಭೆ ಪ್ರದರ್ಶಿಸುವುದು, ಸ್ನೇಹ ಬೆಳೆಸಿಕೊಳ್ಳುವುದು – ಇವೆಲ್ಲಕ್ಕೂ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ಆದರೆ ಇದೇ ವೇದಿಕೆ ಕೆಲವರ ಕೈಯಲ್ಲಿ ಮಾನಸಿಕ ಕಿರುಕುಳದ ಅಸ್ತ್ರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಇತ್ತೀಚಿನ ದಿನಗಳಲ್ಲಿ ಯಾವುದೇ ಪೋಸ್ಟ್ ಹಾಕಿದರೂ ಅದರ ವಿಷಯಕ್ಕೆ ಸಂಬಂಧವೇ ಇಲ್ಲದ, ಉದ್ದೇಶಪೂರ್ವಕವಾಗಿ ಕೆರಳಿಸುವ ಕಾಮೆಂಟ್ಗಳು ಕಾಣಿಸಿಕೊಳ್ಳುತ್ತಿವೆ. ವ್ಯಕ್ತಿಯ ರೂಪ, ಜಾತಿ, ಧರ್ಮ, ಭಾಷೆ, ರಾಜಕೀಯ ಅಭಿಪ್ರಾಯ ಅಥವಾ ವೈಯಕ್ತಿಕ ಬದುಕನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಪ್ರತಿಕ್ರಿಯೆಗಳನ್ನು ಹಾಕುವುದು ಸಾಮಾನ್ಯವಾಗುತ್ತಿದೆ.
ಕೆಲವರು ಕೇವಲ ಮನರಂಜನೆಗಾಗಿ ಅಥವಾ ಗಮನ ಸೆಳೆಯಲು ಇಂತಹ ಕಾಮೆಂಟ್ಗಳನ್ನು ಮಾಡುತ್ತಾರೆ. ಆದರೆ ಇದರ ಪರಿಣಾಮ ಎದುರಾಳಿ ವ್ಯಕ್ತಿಯ ಮೇಲೆ ಎಷ್ಟು ಗಂಭೀರವಾಗಿರಬಹುದು ಎಂಬುದನ್ನು ಯೋಚಿಸುವುದಿಲ್ಲ. ಈ ರೀತಿಯ ಆನ್ಲೈನ್ ಕಿರುಕುಳವೇ ಸೈಬರ್ ಬುಲ್ಲಿಯಿಂಗ್ (Cyber Bullying).
ಸೈಬರ್ ಬುಲ್ಲಿಯಿಂಗ್ ಎಂದರೆ ಇಂಟರ್ನೆಟ್, ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮತ್ತೊಬ್ಬ ವ್ಯಕ್ತಿಯನ್ನು ಅವಮಾನಿಸುವುದು, ಬೆದರಿಸುವುದು, ಹಾಸ್ಯಕ್ಕೆ ಗುರಿಪಡಿಸುವುದು, ಸುಳ್ಳು ಆರೋಪಗಳನ್ನು ಹರಡುವುದು ಅಥವಾ ನಿರಂತರವಾಗಿ ಮಾನಸಿಕ ಕಿರುಕುಳ ನೀಡುವುದು.
ಇದು ಕೇವಲ ಮಕ್ಕಳ ಅಥವಾ ವಿದ್ಯಾರ್ಥಿಗಳ ಸಮಸ್ಯೆಯಲ್ಲ. ರಾಜಕಾರಣಿಗಳು, ಪತ್ರಕರ್ತರು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು, ಮಹಿಳೆಯರು, ಉದ್ಯಮಿಗಳು ಹಾಗೂ ಸಾಮಾನ್ಯ ನಾಗರಿಕರು ಸಹ ಇದಕ್ಕೆ ಬಲಿಯಾಗುತ್ತಿದ್ದಾರೆ.
ಕೆಲವರು ನಕಲಿ ಖಾತೆಗಳನ್ನು ಸೃಷ್ಟಿಸಿ ಇತರರ ಪೋಸ್ಟ್ಗಳಿಗೆ ಕೆಟ್ಟ ಕಾಮೆಂಟ್ಗಳನ್ನು ಹಾಕುತ್ತಾರೆ. ಇನ್ನೂ ಕೆಲವರು ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಗುಂಪುಗಾರಿಕೆ ನಡೆಸುತ್ತಾರೆ. ಪೋಸ್ಟ್ನ ವಿಷಯಕ್ಕೆ ಸಂಬಂಧವಿಲ್ಲದ ರೀತಿಯಲ್ಲಿ ಜಗಳ ಹುಟ್ಟುಹಾಕುವುದು, ವೈಯಕ್ತಿಕ ನಿಂದನೆ ಮಾಡುವುದು, ಅಶ್ಲೀಲ ಪದಗಳನ್ನು ಬಳಸುವುದು, ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಅಥವಾ ಟ್ರೋಲ್ ಮಾಡುವುದೂ ಸೈಬರ್ ಬುಲ್ಲಿಯಿಂಗ್ನ ಭಾಗವೇ ಆಗಿದೆ. ಅನೇಕ ಸಂದರ್ಭಗಳಲ್ಲಿ ಇದು ಮಾನಸಿಕ ಒತ್ತಡ, ಆತಂಕ, ಖಿನ್ನತೆ ಹಾಗೂ ಆತ್ಮವಿಶ್ವಾಸದ ಕುಸಿತಕ್ಕೂ ಕಾರಣವಾಗುತ್ತದೆ.
ವಿಶೇಷವಾಗಿ ಹದಿಹರೆಯದ ಮಕ್ಕಳು ಮತ್ತು ಯುವಜನರು ಇದರ ಪರಿಣಾಮಕ್ಕೆ ಹೆಚ್ಚು ಒಳಗಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಪ್ರತಿಯೊಂದು ಪ್ರತಿಕ್ರಿಯೆಯನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಸ್ವಭಾವ ಅವರಲ್ಲಿರುತ್ತದೆ.
ನಿರಂತರ ಅವಹೇಳನಕಾರಿ ಕಾಮೆಂಟ್ಗಳು ಕೆಲವರಲ್ಲಿ ಒಂಟಿತನ, ಭಯ ಹಾಗೂ ಆತ್ಮಹತ್ಯೆಯ ಚಿಂತನೆಗಳನ್ನೂ ಹುಟ್ಟಿಸಬಹುದು. ಆದ್ದರಿಂದ ಸೈಬರ್ ಬುಲ್ಲಿಯಿಂಗ್ ಅನ್ನು “ಸುಮ್ಮನೆ ತಮಾಷೆ” ಎಂದು ನಿರ್ಲಕ್ಷಿಸುವುದು ಅಪಾಯಕಾರಿ.
ಇಂತಹ ಸಂದರ್ಭಗಳಲ್ಲಿ ಮೊದಲನೆಯದಾಗಿ ಮಾಡಬೇಕಾದ ಕೆಲಸ ಎಂದರೆ ಪ್ರಚೋದನಾತ್ಮಕ ಕಾಮೆಂಟ್ಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡದಿರುವುದು. ಅನೇಕ ಟ್ರೋಲ್ ಖಾತೆಗಳ ಉದ್ದೇಶವೇ ಎದುರಾಳಿ ವ್ಯಕ್ತಿಯನ್ನು ಕೆರಳಿಸಿ ಜಗಳಕ್ಕೆ ಎಳೆಯುವುದು. ನೀವು ಪ್ರತಿಕ್ರಿಯಿಸಿದಷ್ಟೂ ಅವರಿಗೆ ಸಂತೋಷ. ಆದ್ದರಿಂದ ಅನಗತ್ಯ ವಾದಕ್ಕೆ ಇಳಿಯುವುದಕ್ಕಿಂತ ಕಾಮೆಂಟ್ ಅನ್ನು ನಿರ್ಲಕ್ಷಿಸುವುದು ಅಥವಾ ಸಂಬಂಧಿತ ಖಾತೆಯನ್ನು ಬ್ಲಾಕ್ ಮಾಡುವುದು ಉತ್ತಮ.
ಕಾಮೆಂಟ್ಗಳು ಗಂಭೀರ ಸ್ವರೂಪ ಪಡೆದರೆ ಅದರ ಸ್ಕ್ರೀನ್ಶಾಟ್ಗಳನ್ನು ಉಳಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿರುವ “Report” ಸೌಲಭ್ಯ ಬಳಸಿಕೊಂಡು ದೂರು ನೀಡಬಹುದು. ಬೆದರಿಕೆ, ಮಾನಹಾನಿ, ಅಶ್ಲೀಲ ಕಿರುಕುಳ ಅಥವಾ ನಕಲಿ ಖಾತೆಗಳ ಮೂಲಕ ದೌರ್ಜನ್ಯ ನಡೆಯುತ್ತಿದ್ದರೆ ಸೈಬರ್ ಕ್ರೈಂ ವಿಭಾಗವನ್ನು ಸಂಪರ್ಕಿಸಬಹುದು.
ಭಾರತದಲ್ಲಿ ಸೈಬರ್ ಅಪರಾಧಗಳಿಗಾಗಿ ರಾಷ್ಟ್ರೀಯ ಸಹಾಯವಾಣಿ 1930 ಹಾಗೂ ಸೈಬರ್ ಅಪರಾಧ ಪೋರ್ಟಲ್ ಮೂಲಕ ದೂರು ದಾಖಲಿಸುವ ವ್ಯವಸ್ಥೆಯಿದೆ. ಕೀಬೋರ್ಡ್ ಹಿಂದೆ ಅಡಗಿದ್ದೇವೆ ಎಂಬ ಕಾರಣಕ್ಕೆ ಯಾರೂ ಸಂಸ್ಕಾರ ಮತ್ತು ಜವಾಬ್ದಾರಿ ಕಳೆದುಕೊಳ್ಳಬಾರದು. ತಂತ್ರಜ್ಞಾನ ಮುಂದುವರಿದಂತೆ ನಮ್ಮ ಸಂವಹನದ ಸಂಸ್ಕೃತಿಯೂ ಮುಂದುವರಿಯಬೇಕೇ ಹೊರತು, ಮಾನವೀಯತೆ ಹಿಂದೆ ಸರಿಯಬಾರದು!