ಯಲ್ಲಾಪುರದ ಈ ಸ್ನೇಹಿತ ಜೋಡಿಯ ಕಾರ್ಯ ಎಲ್ಲರಿಗೂ ಮಾದರಿ
ಸಮಾಜದಲ್ಲಿ ಕೆಲವರು ಕೇವಲ ತಮ್ಮ ಬದುಕನ್ನು ಮಾತ್ರ ಬದುಕುತ್ತಾರೆ. ಇನ್ನೂ ಕೆಲವರು ತಮ್ಮ ಬದುಕಿನ ಜೊತೆಗೆ ಮತ್ತೊಬ್ಬರ ಬದುಕಿಗೂ ಬೆಳಕಾಗುತ್ತಾರೆ. ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಈ ಇಬ್ಬರು ಸ್ನೇಹಿತರು ಕಳೆದ ಹಲವು ವರ್ಷಗಳಿಂದ ಯಾವುದೇ ಪ್ರಚಾರದ ಹಂಗಿಲ್ಲದೆ, ಪ್ರತಿಫಲದ ನಿರೀಕ್ಷೆಯಿಲ್ಲದೆ, ಆಪತ್ತಿನ ಹೊತ್ತಿನಲ್ಲಿ ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಅವರ ಸೇವೆ ಈಗ ಗ್ರಾಮೀಣ ಭಾಗದಲ್ಲಿ “ಆಪನ್ಮಿತ್ರರು” ಎಂಬ ಹೆಸರಿನಲ್ಲೇ ಗುರುತಿಸಿಕೊಂಡಿದೆ.
ಯಲ್ಲಾಪುರ ತಾಲೂಕಿನ ಆನಗೋಡದ ಗಣಪತಿ ಗುಮ್ಮಾನಿ ಮತ್ತು ಕನ್ನಡಗಲ್ ಗ್ರಾಮದ ಮಂಜುನಾಥ ಹೆಗಡೆ (ಮಂಜಣ್ಣ) ಎಂಬ ಸ್ನೇಹಿತ ಜೋಡಿ ಕಳೆದ 15 ವರ್ಷಗಳಿಂದ ಸಮಾಜಮುಖಿ ಕಾರ್ಯಗಳ ಮೂಲಕ ಗ್ರಾಮೀಣ ಜನರ ವಿಶ್ವಾಸ ಗಳಿಸಿದ್ದಾರೆ. ವೃತ್ತಿಯಲ್ಲಿ ವಿದ್ಯುತ್ ಕಾಮಗಾರಿ (ಇಲೆಕ್ಟ್ರಿಕಲ್ ವೈರಿಂಗ್) ಮಾಡುತ್ತಿದ್ದರೂ, ಬಿಡುವಿನ ವೇಳೆಯನ್ನು ಸಮಾಜ ಸೇವೆಗೆ ಮೀಸಲಿಟ್ಟಿರುವ ಇವರ ಕೆಲಸ ಅನೇಕರಿಗೆ ಪ್ರೇರಣೆಯಾಗಿದೆ.
ಆರ್ಥಿಕ ಸಂಕಷ್ಟದಿಂದ ಶಾಲಾ ಶಿಕ್ಷಣವನ್ನು ಹೈಸ್ಕೂಲ್ ಹಂತದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಇವರಿಬ್ಬರಿಗೂ ಎದುರಾಗಿತ್ತು. ಬಳಿಕ ಸ್ವಯಂಪ್ರೇರಣೆಯಿಂದ ವಿದ್ಯುತ್ ಕಾಮಗಾರಿ ಕಲಿತು ಬದುಕು ಕಟ್ಟಿಕೊಂಡರು. ಆದರೆ, ತಮ್ಮ ಸಂಕಷ್ಟದ ದಿನಗಳಲ್ಲಿ ಸಮಾಜದಿಂದ ಪಡೆದ ಬೆಂಬಲವನ್ನು ಮರೆಯದೆ, ಅದನ್ನೇ ಸಮಾಜಕ್ಕೆ ಮರಳಿ ನೀಡಬೇಕು ಎಂಬ ಸಂಕಲ್ಪ ಮಾಡಿಕೊಂಡರು.
ಅನಾರೋಗ್ಯದಿಂದ ಬಳಲುವವರನ್ನು ಸೂಕ್ತ ಆಸ್ಪತ್ರೆಗೆ ಕರೆದೊಯ್ಯುವುದು, ಚಿಕಿತ್ಸೆಗೆ ಮಾರ್ಗದರ್ಶನ ನೀಡುವುದು, ಆಸ್ಪತ್ರೆಯಲ್ಲೇ ಅವರೊಂದಿಗೆ ಉಳಿದು ಆರೈಕೆ ಮಾಡುವುದು, ಮನೆಗೆ ಸುರಕ್ಷಿತವಾಗಿ ಕರೆತರುವುದು ಸೇರಿದಂತೆ ಹಲವು ಕಾರ್ಯಗಳನ್ನು ಈ ಸ್ನೇಹಿತರು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ. ವಿಶೇಷವಾಗಿ ಯಲ್ಲಾಪುರ ಭಾಗದಿಂದ ಮಂಗಳೂರಿನ ದೇರಳಕಟ್ಟೆಯ ನಿಟ್ಟೆ ಆಸ್ಪತ್ರೆ, ಮಣಿಪಾಲ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ತೆರಳುವ ರೋಗಿಗಳಿಗೆ ಇವರ ಮಾರ್ಗದರ್ಶನ ದೊಡ್ಡ ನೆರವಾಗುತ್ತಿದೆ.
ವರ್ಷಂಪ್ರತಿ ನೂರಕ್ಕೂ ಹೆಚ್ಚು ರೋಗಿಗಳನ್ನು ನಿಟ್ಟೆ ಆಸ್ಪತ್ರೆಗೆ ಕರೆದೊಯ್ದಿರುವ ಇವರಿಗೆ ಅಲ್ಲಿನ ಚಿಕಿತ್ಸಾ ವ್ಯವಸ್ಥೆಯ ಸಂಪೂರ್ಣ ಪರಿಚಯವಿದೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದರಿಂದ ಹಿಡಿದು, ಚಿಕಿತ್ಸೆಗಾಗಿ ಅಗತ್ಯ ನೆರವು ಒದಗಿಸುವವರೆಗೂ ಇವರ ಸೇವೆ ನಿರಂತರವಾಗಿದೆ. ಆಸ್ಪತ್ರೆಯವರು ಕೂಡ ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಆಸ್ಪತ್ರೆಯ ಶುಲ್ಕದಲ್ಲಿ ರಿಯಾಯಿತಿ ನೀಡುವ ಮಟ್ಟಿಗೆ ಪರಿಚಿತರು.
ಅಷ್ಟೇ ಅಲ್ಲ, ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿರುವ ಉದಾಹರಣೆಗಳೂ ಇವೆ. ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕೆಲಸವನ್ನೂ ಹಲವು ಬಾರಿ ಮಾಡಿದ್ದಾರೆ.
ರಕ್ತದಾನ ಶಿಬಿರಗಳಿಗಾಗಿ ಕಾಯದೇ, ಆಸ್ಪತ್ರೆಯಲ್ಲೇ ರೋಗಿಗೆ ಅಗತ್ಯವಿದ್ದಾಗ ತಾವೇ ರಕ್ತದಾನ ಮಾಡುವ ಅಭ್ಯಾಸವೂ ಇವರದ್ದು. ಅಗತ್ಯ ಬಂದಾಗ ವರ್ಷಕ್ಕೆ ಹಲವು ಬಾರಿ ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಲು ನೆರವಾಗಿದ್ದಾರೆ.
ಗಂಗಾವಳಿ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪದ ಸಂದರ್ಭಗಳಲ್ಲೂ ತಮ್ಮ ತಂಡದೊಂದಿಗೆ ನೆರವಿನ ಕಾರ್ಯದಲ್ಲಿ ತೊಡಗಿಕೊಂಡಿರುವ ಗಣಪತಿ ಗುಮ್ಮಾನಿ ಮತ್ತು ಮಂಜಣ್ಣ, ಯಾವುದೇ ಜಾತಿ-ಧರ್ಮದ ಭೇದವಿಲ್ಲದೆ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ.
ವ್ಯಾಪಾರೀಕರಣದ ಯುಗದಲ್ಲಿ ಸೇವೆಯನ್ನೇ ಜೀವನದ ಧ್ಯೇಯವಾಗಿಸಿಕೊಂಡಿರುವ ಈ ಸ್ನೇಹಿತ ಜೋಡಿ, ಯಲ್ಲಾಪುರ ಭಾಗದ ಜನರಿಗೆ ನಿಜವಾದ “ಆಪನ್ಮಿತ್ರರು” ಎಂಬ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ. ಇವರ ನಿಸ್ವಾರ್ಥ ಸೇವೆ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ ಎಂಬುದು ಸ್ಥಳೀಯರ ಆಶಯ.
– ಪ್ರಶಾಂತ್ ಭಟ್ಟ, ಹೆಗ್ಗಾರ.