ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಅರಣ್ಯ ಭೂಮಿ ವಾಸ್ತವ್ಯ ಹಾಗೂ ಸಾಗುವಳಿ ಹಕ್ಕಿಗಾಗಿ ಆರಂಭವಾದ ಹೋರಾಟಕ್ಕೆ ಸೆ.12ರಂದು 35 ವರ್ಷ ಪೂರ್ಣಗೊಳ್ಳುತ್ತಿದ್ದು, ಇಷ್ಟೊಂದು ದೀರ್ಘಕಾಲ ಹೋರಾಟ ನಡೆದಿದ್ದರೂ ಅರಣ್ಯವಾಸಿಗಳ ಭೂಮಿ ಹಕ್ಕು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಅರಣ್ಯ ಹಕ್ಕು ಕಾಯಿದೆಗೂ ಗ್ರಹಣ ಹಿಡಿದಂತಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಶಿರಸಿಯ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಹೋರಾಟದ 34 ವರ್ಷಗಳ ಮಜಲುಗಳನ್ನು ವಿಶ್ಲೇಷಿಸಿ ಮಾತನಾಡಿದ ಅವರು, ಭೂಮಿ ಹಕ್ಕಿಗಾಗಿ ಜಿಲ್ಲೆಯ ಹಾಗೂ ರಾಜ್ಯ ಮಟ್ಟದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಅರಣ್ಯವಾಸಿಗಳನ್ನು ಸಂಘಟಿಸಿ ನಡೆಸಿದ ವಿವಿಧ ಹಂತದ ಹೋರಾಟ ದಾಖಲಾರ್ಹವಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಅರಣ್ಯವಾಸಿಗಳಾಗಿದ್ದು, ಕಳೆದ 34 ವರ್ಷಗಳಿಂದ ನಿರಂತರ ಸಂಘಟನಾತ್ಮಕ ಹೋರಾಟ ನಡೆಸಲಾಗಿದೆ. ಹೋರಾಟದ ಮೂಲಕ ಎಲ್ಲರಿಗೂ ಭೂಮಿ ಹಕ್ಕು ದೊರಕಿಸಲು ಸಾಧ್ಯವಾಗದಿದ್ದರೂ, ಅರಣ್ಯ ಭೂಮಿ ಸಾಗುವಳಿಗೆ ಸಂಬಂಧಿಸಿದ ಕಾನೂನು ಜ್ಞಾನವನ್ನು ಅರಣ್ಯವಾಸಿಗಳಲ್ಲಿ ಮೂಡಿಸಲು ಹಾಗೂ ಅರಣ್ಯ ಅಧಿಕಾರಿಗಳಿಂದ ನಡೆಯುತ್ತಿದ್ದ ದೌರ್ಜನ್ಯ ಮತ್ತು ಕಿರುಕುಳವನ್ನು ಸಾಕಷ್ಟು ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಹೋರಾಟ ಆರಂಭವಾದಾಗಿನಿಂದ ಸರ್ಕಾರವು ಅರಣ್ಯವಾಸಿಗಳಿಂದ ಭೂಮಿ ಹಕ್ಕಿಗಾಗಿ ಒಟ್ಟು 13 ಬಾರಿ ಅರ್ಜಿ ಸ್ವೀಕರಿಸಿರುವುದು ದಾಖಲಾರ್ಹ. ಚುನಾವಣಾ ಸಂದರ್ಭದಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿ ಅರಣ್ಯ ಭೂಮಿ ಹಕ್ಕಿನ ಭರವಸೆ ಕಾಣಿಸಿಕೊಳ್ಳುತ್ತದೆಯಾದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಮಾತ್ರ ಯಶಸ್ಸು ಸಾಧ್ಯವಾಗಿಲ್ಲ ಎಂದು ರವೀಂದ್ರ ನಾಯ್ಕ ವಿಷಾದಿಸಿದರು.
ನಿರಂತರ ಹೋರಾಟದಲ್ಲಿ ಸಾಮಾಜಿಕ ಪ್ರಜ್ಞೆ ಹಾಗೂ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುವಲ್ಲಿ ಸಾಮಾಜಿಕ ಚಿಂತಕ ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನ ಪರಿಣಾಮಕಾರಿಯಾಗಿತ್ತು. ಕಾನೂನು ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ವರೆಗೂ ನಿವೃತ್ತ ನ್ಯಾಯಮೂರ್ತಿಗಳಿಂದ ದೊರೆತ ಸಲಹೆ ಹಾಗೂ ಸೂಚನೆಗಳು ಹೋರಾಟಕ್ಕೆ ಮತ್ತಷ್ಟು ಗಟ್ಟಿತನ ನೀಡಿವೆ ಎಂದು ರವೀಂದ್ರ ನಾಯ್ಕ ತಿಳಿಸಿದರು.
ಅರಣ್ಯವಾಸಿಗಳ ಹಿತ ಕಾಪಾಡುವ ಉದ್ದೇಶದಿಂದ ವೇದಿಕೆಯ ಸ್ವಪ್ರೇರಣೆಯಿಂದ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳಲ್ಲಿಯೂ ಅಗತ್ಯ ಪ್ರಕರಣಗಳಲ್ಲಿ ಪಕ್ಷಗಾರರಾಗಿ ಸೇರ್ಪಡೆಗೊಂಡಿರುವುದು ಹೋರಾಟದ ಪ್ರಮುಖ ಮೈಲುಗಲ್ಲು ಎಂದು ಅವರು ಹೇಳಿದರು.
ಇದೇ ವೇಳೆ ಜಿಲ್ಲೆಯ ಪರಿಸರ ಹಾಗೂ ಅರಣ್ಯವಾಸಿಗಳ ಹಿತಾಸಕ್ತಿಗೆ ಸಂಬಂಧಿಸಿದಂತೆ ಅಘನಾಶಿನಿ–ಬೇಡ್ತಿ ಯೋಜನೆ ಹಾಗೂ ಪಂಪ್ಸ್ಟೋರೇಜ್ ಯೋಜನೆಗಳ ವಿರುದ್ಧವೂ ವೇದಿಕೆ ಧ್ವನಿ ಎತ್ತಿದೆ. ಅರಣ್ಯ ಭೂಮಿ ಹಕ್ಕಿನ ಹೋರಾಟ 35ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸೆ.12ರಂದು ಬೆಳಗ್ಗೆ 10.30ಕ್ಕೆ ಬೈಂದೂರಿನಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.