ಒಂದು ದಿನ ಊಟದಲ್ಲಿ ಉಪ್ಪು ಕಡಿಮೆಯಾದರೂ ನಮಗೆ ಆಹಾರ ರುಚಿಸದು. ಅಷ್ಟರಮಟ್ಟಿಗೆ ಉಪ್ಪು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದರೆ ಇದೇ ಉಪ್ಪಿನ ಬಗ್ಗೆ ಇತ್ತೀಚೆಗೆ ಹಲವಾರು ಚರ್ಚೆಗಳು ಜೋರಾಗುತ್ತಿವೆ.
ಸಾಮಾನ್ಯ ಉಪ್ಪು ಆರೋಗ್ಯಕ್ಕೆ ಹಾನಿಕರ, ಹಿಮಾಲಯ ಪಿಂಕ್ ಸಾಲ್ಟ್ ಬೆಸ್ಟ್, ರಾಕ್ ಸಾಲ್ಟ್‌ನಲ್ಲಿ ಮಿನರಲ್ ಹೆಚ್ಚು, ಸಮುದ್ರ ಉಪ್ಪು ಹೆಚ್ಚು ನೈಸರ್ಗಿಕ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕೆಲವರು ಸಾಮಾನ್ಯ ಉಪ್ಪನ್ನು ಸಂಪೂರ್ಣ ಬಿಟ್ಟು ದುಬಾರಿ ಉಪ್ಪುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ನಿಜಕ್ಕೂ ನಾವು ತಿನ್ನುವ ಉಪ್ಪು ಸುರಕ್ಷಿತವೇ? ಯಾವ ಉಪ್ಪು ಉತ್ತಮ? ಹೆಚ್ಚು ಉಪ್ಪು ತಿಂದರೆ ಏನಾಗುತ್ತದೆ? ಎಂಬ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ತಿಳಿದುಕೊಳ್ಳುವುದು ಅಗತ್ಯ.
ಉಪ್ಪು ಎಂದರೆ ಮುಖ್ಯವಾಗಿ ಸೋಡಿಯಂ ಕ್ಲೋರೈಡ್. ನಮ್ಮ ದೇಹದ ನರಮಂಡಲ, ಸ್ನಾಯುಗಳ ಚಲನೆ, ದೇಹದ ನೀರಿನ ಸಮತೋಲನ ಇತ್ಯಾದಿಗಳಿಗೆ ಸೋಡಿಯಂ ಅತ್ಯಗತ್ಯ. ಆದರೆ ಇದೇ ಸೋಡಿಯಂ ಪ್ರಮಾಣ ದೇಹದಲ್ಲಿ ಮಿತಿಮೀರಿದರೆ ಸಮಸ್ಯೆಗಳು ಆರಂಭವಾಗುತ್ತವೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಮಾತ್ರ ಸೇವಿಸಬೇಕು. ಅಂದರೆ ಒಂದು ಟೀ ಸ್ಪೂನ್‌ಗೂ ಕಡಿಮೆ. ಆದರೆ ನಮ್ಮ ದಿನನಿತ್ಯದ ಆಹಾರ ಪದ್ಧತಿ ನೋಡಿದರೆ ಈ ಪ್ರಮಾಣ ಬಹಳಷ್ಟು ಜನರಲ್ಲಿ ಮೀರಿಹೋಗುತ್ತಿದೆ.
ಉಪ್ಪಿನಕಾಯಿ, ಪ್ಯಾಕೆಟ್ ಫುಡ್, ಚಿಪ್ಸ್, ಬೇಕರಿ ಪದಾರ್ಥಗಳು, ಫಾಸ್ಟ್ ಫುಡ್, ಸಾಸ್‌ಗಳು ಇವೆಲ್ಲದರಲ್ಲೂ ಅತಿಯಾದ ಉಪ್ಪು ಅಡಗಿರುತ್ತದೆ. ಇತ್ತೀಚೆಗೆ ಪಿಂಕ್ ಸಾಲ್ಟ್ ಅಥವಾ ಹಿಮಾಲಯ ಉಪ್ಪು ತುಂಬ ಜನಪ್ರಿಯವಾಗಿದೆ. ಇದರಲ್ಲಿ ಕೆಲವು ಖನಿಜಾಂಶಗಳಿರುವುದು ಸತ್ಯ. ಆದರೆ ಅದು ಆರೋಗ್ಯದಲ್ಲಿ ಅತಿದೊಡ್ಡ ಅದ್ಭುತ ಬದಲಾವಣೆ ತರುತ್ತದೆ ಎಂಬುದಕ್ಕೆ ಸ್ಪಷ್ಟ ವೈಜ್ಞಾನಿಕ ಸಾಕ್ಷ್ಯ ಇಲ್ಲ.
ಇಲ್ಲಿ ಮತ್ತೊಂದು ಮುಖ್ಯ ವಿಷಯ ಅಯೋಡಿನ್. ನಮ್ಮ ದೇಹಕ್ಕೆ ಅತ್ಯಗತ್ಯವಾದ ಖನಿಜಗಳಲ್ಲಿ ಅಯೋಡಿನ್ ಕೂಡ ಒಂದು. ಇದು ಥೈರಾಯ್ಡ್ ಗ್ರಂಥಿಯ ಸರಿಯಾದ ಕಾರ್ಯಕ್ಕೆ ಅಗತ್ಯ.
ಕೆಲ ನೈಸರ್ಗಿಕ ಉಪ್ಪುಗಳಲ್ಲಿ ಅಯೋಡಿನ್ ಕಡಿಮೆ ಇರಬಹುದು. ಹೀಗಾಗಿ ನೈಸರ್ಗಿ” ಎಂಬ ಹೆಸರಿಗಷ್ಟೇ ಮಾರು ಹೋಗಿ ಆರೋಗ್ಯವನ್ನು ನಿರ್ಲಕ್ಷಿಸುವುದು ಸರಿಯಲ್ಲ.
ಹಿಂದೆ ನಮ್ಮ ಹಿರಿಯರು ಕಡಿಮೆ ಪದಾರ್ಥಗಳಲ್ಲಿ, ನೈಸರ್ಗಿಕ ಆಹಾರದಲ್ಲಿ ಬದುಕುತ್ತಿದ್ದರು. ಅವರು ಹೆಚ್ಚು ಬೆವರು ಸುರಿಸುವ ಕೆಲಸ ಮಾಡುತ್ತಿದ್ದರು. ದೇಹದಲ್ಲಿನ ಉಪ್ಪಿನ ಸಮತೋಲನ ಸಹಜವಾಗಿಯೇ ಉಳಿಯುತ್ತಿತ್ತು. ಆದರೆ ಇಂದಿನ ಜೀವನಶೈಲಿಯಲ್ಲಿ ವ್ಯಾಯಾಮ ಕಡಿಮೆ, ಒತ್ತಡ ಹೆಚ್ಚಾಗಿದೆ.
ಹೀಗಾಗಿ ದೇಹಕ್ಕೆ ಸೇರುವ ಉಪ್ಪಿನ ಪ್ರಮಾಣವೂ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲೇ ರಕ್ತದೊತ್ತಡ, ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಅಡುಗೆಯಲ್ಲಿ ಉಪ್ಪಿನ ಬಳಕೆ ಕಡಿಮೆ ಮಾಡುವುದು, ಹೊರಗಿನ ಫಾಸ್ಟ್ ಫುಡ್ ಕಡಿಮೆ ತಿನ್ನುವುದು, ಪ್ಯಾಕೆಟ್ ಆಹಾರದ ಲೇಬಲ್ ಓದುವುದು, ಹೆಚ್ಚು ನೀರು ಕುಡಿಯುವುದು, ನಿಯಮಿತ ವ್ಯಾಯಾಮ ಇವುಗಳು ಆರೋಗ್ಯ ಕಾಪಾಡಲು ನೆರವಾಗುತ್ತವೆ.
ಇಂದು ನಾವು ತಿನ್ನುವ ಆಹಾರದಲ್ಲಿ ರುಚಿ ಹೆಚ್ಚಾಗಿದೆ. ಆದರೆ ಆರೋಗ್ಯ ಕಡಿಮೆಯಾಗುತ್ತಿದೆ. ನಾಲಿಗೆಗೆ ತೃಪ್ತಿ ಕೊಡುವ ಪ್ರತಿಯೊಂದು ಪದಾರ್ಥವೂ ದೇಹಕ್ಕೆ ಒಳ್ಳೆಯದೇ ಆಗಿರಬೇಕು ಎನ್ನುವುದಿಲ್ಲ. ಪ್ರತಿದಿನ ನಮ್ಮ ಅಡುಗೆಮನೆಯಲ್ಲಿ ಕಾಣಿಸುವ ಸಾಮಾನ್ಯ ಉಪ್ಪಿನಲ್ಲೂ ಆರೋಗ್ಯದ ದೊಡ್ಡ ಸತ್ಯ ಅಡಗಿದೆ. ಹೀಗಾಗಿ “ಯಾವ ಉಪ್ಪು? ಎನ್ನುವುದಕ್ಕಿಂತ “ಎಷ್ಟು ಉಪ್ಪು?” ಎನ್ನುವುದೇ ಹೆಚ್ಚು ಮುಖ್ಯ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.