Friday, July 24, 2026
Join WhatsApp Group
HomeAgricultureಅಡಿಕೆ–ಕ್ಯಾನ್ಸರ್ ವಿವಾದಕ್ಕೆ ಭಾಗಶಃ ತೆರೆ

ಅಡಿಕೆ–ಕ್ಯಾನ್ಸರ್ ವಿವಾದಕ್ಕೆ ಭಾಗಶಃ ತೆರೆ

ನೇರ ಸಂಬಂಧಕ್ಕೆ ಸಾಕ್ಷ್ಯ ಇಲ್ಲ, ಇನ್ನಷ್ಟು ಅಧ್ಯಯನ ಅಗತ್ಯ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಡಿಕೆ ಹಾಗೂ ಅಡಿಕೆ ಹಾಳೆಯ ಬಳಕೆ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ವಲಯಗಳಲ್ಲಿ ಹರಿದಾಡಿ, ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ್ದವು.

ಈ ಹಿನ್ನೆಲೆ, ವಿಷಯದ ನಿಖರತೆ ತಿಳಿದುಕೊಳ್ಳಲು ಸರ್ಕಾರ ಅಧ್ಯಯನ ಕೈಗೊಳ್ಳಲು ಮುಂದಾಗಿತ್ತು. ಈ ಸಂಬಂಧ, ಅಡಿಕೆಯ ಆರೋಗ್ಯ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸುವಂತೆ ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯಗೆ ಸೂಚನೆ ನೀಡಲಾಗಿತ್ತು.

ವೈಜ್ಞಾನಿಕ ಅಧ್ಯಯನದ ಮಾಹಿತಿಯ ಆಧಾರದ ಮೇಲೆ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿತ್ತು. ವಿಶ್ವವಿದ್ಯಾಲಯದ ಪ್ರಾಥಮಿಕ ಅಧ್ಯಯನದ ಪ್ರಕಾರ, ಅಡಿಕೆ ಅಥವಾ ಅಡಿಕೆ ಹಾಳೆಯಿಂದ ನೇರವಾಗಿ ಕ್ಯಾನ್ಸರ್ ಉಂಟಾಗುತ್ತದೆ ಎಂಬುದಕ್ಕೆ ಸ್ಪಷ್ಟವಾದ ಸಾಕ್ಷ್ಯಗಳು ದೊರೆತಿಲ್ಲವೆಂದು ತಿಳಿದುಬಂದಿದೆ. ಆದರೆ, ಇದು ಅಂತಿಮ ನಿರ್ಣಯವಾಗಿಲ್ಲ ಎಂದು ಕೂಡ ಸ್ಪಷ್ಟಪಡಿಸಲಾಗಿದೆ.

ಇದರ ಜೊತೆಗೆ, ಕೇಂದ್ರ ಸರ್ಕಾರದ ಮಧ್ಯಂತರ ವರದಿಯೂ ಅಡಿಕೆ ಮತ್ತು ಕ್ಯಾನ್ಸರ್ ನಡುವಿನ ನೇರ ಸಂಬಂಧವನ್ನು ದೃಢಪಡಿಸುವ ಇನ್ನಷ್ಟು ವೈಜ್ಞಾನಿಕ ಸಾಕ್ಷ್ಯಗಳು ಅಗತ್ಯವಿವೆ ಎಂದು ಹೇಳಿದೆ. ಹೀಗಾಗಿ ಈ ವಿಷಯದಲ್ಲಿ ಇನ್ನಷ್ಟು ವಿವರವಾದ ಅಧ್ಯಯನ ನಡೆಯಬೇಕಿದೆ.

ಆದರೆ, ಅತಿಯಾದ ಅಡಿಕೆ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಧ್ಯಯನ ಒತ್ತಿಹೇಳಿದೆ. ವಿಶೇಷವಾಗಿ, ನಿರಂತರವಾಗಿ ಅಡಿಕೆ ಜಗಿಯುವ ಅಭ್ಯಾಸದಿಂದ ಬಾಯಿ ಹಾಗೂ ದವಡೆ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಒಟ್ಟಾರೆ, ಅಡಿಕೆ ಬಳಕೆಯ ಬಗ್ಗೆ ಹರಿದಾಡುತ್ತಿದ್ದ ಆತಂಕಗಳಿಗೆ ಭಾಗಶಃ ಸ್ಪಷ್ಟನೆ ಸಿಕ್ಕಿದ್ದರೂ, ಅಂತಿಮ ನಿರ್ಧಾರಕ್ಕಾಗಿ ಸಮಗ್ರ ಅಧ್ಯಯನ ವರದಿ ಪ್ರಕಟವಾಗಬೇಕಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share