Sunday, September 6, 2026
Join WhatsApp Group
HomeInformationಏಕ್ ಥಾ 'ಬ್ಲ್ಯಾಕ್ ಟೈಗರ್'!

ಏಕ್ ಥಾ ‘ಬ್ಲ್ಯಾಕ್ ಟೈಗರ್’!

ಒಬ್ಬ ಅಸಾಮಾನ್ಯ ಕಲಾವಿದನಲ್ಲಿ ಅಡಗಿದ್ದ ಅಪ್ರತಿಮ ಗೂಢಚಾರ

ಹೀಗೊಬ್ಬ ವ್ಯಕ್ತಿ ನಮ್ಮ ಭಾರತದಲ್ಲೇ ಇದ್ದರು ಎಂಬ ವಿಚಾರ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಯಾವುದೋ ಥ್ರಿಲ್ಲರ್ ಕಾದಂಬರಿಯೋ, ಹಾಲಿವುಡ್ ಅಥವಾ ಬಾಲಿವುಡ್ ಸಿನಿಮಾದ ಕಥಾಹಂದರದಂತೆ ತಮ್ಮ ಜೀವನವನ್ನು ತೇಯ್ದ ಈ ವ್ಯಕ್ತಿಗೆ ಕೊನೆಯಲ್ಲಿ ಸಿಕ್ಕಿದ್ದು ಮಾತ್ರ ಜೈಲುವಾಸದ ಕರಾಳ ದಿನಗಳು.

ನೇರವಾಗಿ ಹೇಳಬೇಕೆಂದರೆ, ಈತ ‘ಬ್ಲ್ಯಾಕ್ ಟೈಗರ್’. ಭಾರತ-ಪಾಕಿಸ್ತಾನಗಳ ಯುದ್ಧ, ಗಡಿ ವಿವಾದ ಇತ್ಯಾದಿಗಳನ್ನು ನೋಡುತ್ತಲೇ ಬೆಳೆದ ಈ ಬ್ಲ್ಯಾಕ್ ಟೈಗರ್, ಮುಂದೊಂದು ದಿನ ತಾನೂ ಕೂಡ ತನ್ನ ಹೆಮ್ಮೆಯ ಭಾರತದ ಪರವಾಗಿ ರಹಸ್ಯ ಕಾರ್ಯಾಚರಣೆಯ ಭಾಗವಾಗಿಬಿಡುತ್ತೇನೆ ಎಂದು ಅಂದುಕೊಂಡಿರಲಿಲ್ಲವೇನೋ!

ಆತ, ರವೀಂದ್ರ ಕೌಶಿಕ್. ಭಾರತ-ಪಾಕಿಸ್ತಾನ ಗಡಿಗೆ ಹತ್ತಿರವಿರುವ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಏಪ್ರಿಲ್ 11, 1952ರಂದು ಜನಿಸಿದ ರವೀಂದ್ರ ಕೌಶಿಕ್, 1965 ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧಗಳ ಹಿನ್ನೆಲೆಯಲ್ಲಿ ಬೆಳೆದರು. ಎಸ್.ಡಿ. ಬಿಹಾನಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದ ಈತ, ನಾಟಕ ಮತ್ತು ಮಿಮಿಕ್ರಿಯಲ್ಲಿ ಎತ್ತಿದ ಕೈ. ಎದುರು ಕುಳಿತ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸುವ ಅಪೂರ್ವ ಕಲೆ ಈತನಿಗೆ ಸಿದ್ಧಿಸಿಬಿಟ್ಟಿತ್ತು. ಯಾವುದೋ ಒಂದು ಪಾತ್ರದೊಳಗೆ ಹೊಕ್ಕರೆ, ಎದುರಿದ್ದವರು ಮೈಮರೆಯುತ್ತಿದ್ದರು. ಹಾಗಿತ್ತು ಈತನ ಅಭಿನಯ.

21ನೇ ವಯಸ್ಸಿನಲ್ಲಿ, ಲಕ್ನೋದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ, ಚೀನಾಕ್ಕೆ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸುವ ಭಾರತೀಯ ಸೇನಾಧಿಕಾರಿಯ ಪಾತ್ರವನ್ನು ನಿರ್ವಹಿಸಿದರು. ಆ ಪಾತ್ರದಲ್ಲಿ ರವೀಂದ್ರರ ಅಭಿನಯ ಹೇಗಿತ್ತೆಂದರೆ, ಅದು ಹೇಗೋ ಭಾರತದ ವಿದೇಶಿ ಗುಪ್ತಚರ ಸಂಸ್ಥೆ RAW (Research and Analysis Wing) ಅಧಿಕಾರಿಗಳ ಗಮನವನ್ನೂ ಸೆಳೆದುಬಿಟ್ಟಿತ್ತು. 1973ರಲ್ಲಿ ಬಿಕಾಂ ಪದವಿಯನ್ನು ಪೂರ್ಣಗೊಳಿಸಿದ ನಂತರ, ರವೀಂದ್ರ ಅವರು ಹೊಸ ಕೆಲಸವನ್ನು ಪ್ರಾರಂಭಿಸಲು ದೆಹಲಿಗೆ ಹೋಗುತ್ತಿರುವುದಾಗಿ ತಮ್ಮ ತಂದೆಗೆ ತಿಳಿಸಿದರು. ಆದರೆ ನಿಜವಾಗಿ, ಅವರು RAWನೊಂದಿಗೆ ತಮ್ಮ ಎರಡು ವರ್ಷಗಳ ತರಬೇತಿ ಅವಧಿಯನ್ನು ಪ್ರಾರಂಭಿಸಲಿದ್ದರು.

ರವೀಂದ್ರ ಆಗಲೇ ಪಂಜಾಬಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ತರಬೇತಿಯಲ್ಲಿ ಅಧಿಕಾರಿಗಳು ಅವರಿಗೆ ಉರ್ದು ಕಲಿಸಿದರು. ಇಸ್ಲಾಮಿಕ್ ಧರ್ಮಗ್ರಂಥಗಳೊಂದಿಗೆ ಪರಿಚಯ ಮಾಡಿಸಿದರು. ಸುನ್ನತಿಗೂ ಒಳಗಾಗಿದ್ದರು. ಒಟ್ಟಿನಲ್ಲಿ ಅಲ್ಲಿನ ತರಬೇತಿ ಹೇಗಿತ್ತೆಂದರೆ, ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯ ‘ನಿವಾಸಿ ಏಜೆಂಟ್’ ಆಗಲು ಸಂಪೂರ್ಣ ಸಿದ್ಧತೆ ನಡೆಸಲಾಗಿತ್ತು.

1975ರಲ್ಲಿ ಅವರು ಪಾಕಿಸ್ತಾನಕ್ಕೆ ತೆರಳಿ, ಇಸ್ಲಾಮಾಬಾದ್ ನಿವಾಸಿಯಾಗಿ ನಬಿ ಅಹ್ಮದ್ ಶಕೀರ್ ಎಂಬ ಹೆಸರಿನೊಂದಿಗೆ ಹೊಸ ವ್ಯಕ್ತಿಯಾದರು. ಅವರು ಭಾರತದ ನಿವಾಸಿ ಎಂಬುದಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ ದಾಖಲೆಗಳನ್ನು ನಾಶಪಡಿಸಲಾಯಿತು. ನಂತರ ಪಾಕಿಸ್ತಾನ ಸೇನೆಯ ಮಿಲಿಟರಿ ಲೆಕ್ಕಪತ್ರ ವಿಭಾಗದಲ್ಲಿ ಅಧಿಕಾರಿಯಾಗಿ ಸೇರಿದರು. ಪಾಕಿಸ್ತಾನದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದ ರವೀಂದ್ರ, 1979ರಿಂದ 1983ರ ನಡುವೆ ಭಾರತೀಯ ರಕ್ಷಣಾ ಅಧಿಕಾರಿಗಳಿಗೆ ಅತ್ಯಂತ ಗೌಪ್ಯ ಮಾಹಿತಿಗಳನ್ನು ರವಾನಿಸುತ್ತಿದ್ದರು.

ಕೇವಲ 23ನೇ ವಯಸ್ಸಿನಲ್ಲಿ ಭಾರತದ ವಿದೇಶಿ ಗುಪ್ತಚರ ಸಂಸ್ಥೆ RAWನೊಂದಿಗೆ ತಮ್ಮ ಒಡನಾಟವನ್ನು ಪ್ರಾರಂಭಿಸಿದ ರವೀಂದ್ರ, ನಂತರ ಪಾಕಿಸ್ತಾನ ಸೇನೆಯಲ್ಲಿ ಮೇಜರ್ ಹುದ್ದೆಗೂ ಏರಿದರು. ಪಾಕಿಸ್ತಾನದಿಂದ ಅನೇಕ ರಹಸ್ಯ ದಾಖಲೆಗಳನ್ನು ಯಶಸ್ವಿಯಾಗಿ ಭಾರತೀಯ ಸೇನೆಗೆ ಹಸ್ತಾಂತರಿಸಿದರು. 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಅವರ ಅಮೂಲ್ಯ ಸೇವೆಯನ್ನು ಗುರುತಿಸಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ‘ಬ್ಲ್ಯಾಕ್ ಟೈಗರ್’ ಎಂಬ ಬಿರುದನ್ನು ನೀಡಿದರು.

ಸೆಪ್ಟೆಂಬರ್ 1983ರಲ್ಲಿ, ರವೀಂದ್ರರ ಎಂಟು ವರ್ಷಗಳ ರಹಸ್ಯ ಗುರುತು ಮುರಿದುಬಿದ್ದಿತ್ತು. ಬ್ಲ್ಯಾಕ್ ಟೈಗರ್‌ನೊಂದಿಗೆ ಸಂಪರ್ಕ ಸಾಧಿಸಲು RAW ಕಳುಹಿಸಿದ್ದ ಮತ್ತೊಬ್ಬ ರಹಸ್ಯ ಏಜೆಂಟ್ ಇನ್ಯಾತ್ ಮಸೀಹ್ ಪಾಕಿಸ್ತಾನಿ ಪಡೆಗಳ ವಿಚಾರಣೆಯ ವೇಳೆ ತನ್ನ ಕೆಲಸದ ನಿಜವಾದ ಸ್ವರೂಪವನ್ನು ಬಾಯಿಬಿಟ್ಟಿದ್ದ. ಇದರ ಪರಿಣಾಮವಾಗಿ ರವೀಂದ್ರ ಬಂಧಿತರಾದರು. ಮುಂದಿನ ಎರಡು ವರ್ಷಗಳ ಕಾಲ ಸಿಯಾಲ್ಕೋಟ್‌ನ ವಿಚಾರಣಾ ಕೇಂದ್ರದಲ್ಲಿ ಮಾಹಿತಿಗಾಗಿ ಅವರಿಗೆ ಅಮಾನವೀಯ ಚಿತ್ರಹಿಂಸೆ ನೀಡಲಾಯಿತು.

1985ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬ್ಲ್ಯಾಕ್ ಟೈಗರ್‌ಗೆ ಮರಣದಂಡನೆ ವಿಧಿಸಿತಾದರೂ, ನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಅವರನ್ನು ಸಿಯಾಲ್ಕೋಟ್, ಕೋಟ್ ಲಖ್ಪತ್ ಮತ್ತು ಮಿಯಾನ್ವಾಲಿ ಸೇರಿದಂತೆ ಹಲವು ಜೈಲುಗಳಲ್ಲಿ ಇರಿಸಲಾಯಿತು. ಜೈಲಿನಿಂದಲೇ ಅವರು ರಹಸ್ಯವಾಗಿ ತಮ್ಮ ಕುಟುಂಬಕ್ಕೆ ಪತ್ರಗಳನ್ನು ಬರೆಯುತ್ತಿದ್ದರು. ನವೆಂಬರ್ 2001ರಲ್ಲಿ ಶ್ವಾಸಕೋಶದ ಕ್ಷಯರೋಗ ಮತ್ತು ಹೃದ್ರೋಗದಿಂದ ಸಾವನ್ನಪ್ಪುವ ಮೂರು ದಿನಗಳ ಮೊದಲು ಕೂಡ ಅವರು ಪತ್ರ ಬರೆದಿದ್ದರು. ಕೊನೆಗೆ ಅವರನ್ನು ಮುಲ್ತಾನ್‌ನ ನ್ಯೂ ಸೆಂಟ್ರಲ್ ಜೈಲಿನ ಆವರಣದಲ್ಲೇ ಸಮಾಧಿ ಮಾಡಲಾಯಿತು.

ರವೀಂದ್ರ ಕೌಶಿಕ್ ಅವರಂತಹ ಇನ್ನೆಷ್ಟೋ ‘ಬ್ಲ್ಯಾಕ್ ಟೈಗರ್’ಗಳು ಈ ಪವಿತ್ರ ಭೂಮಿಯಲ್ಲಿ ಸೇವೆ ಸಲ್ಲಿಸಲಿ. ಆದರೆ, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಅವರಿಗೆ ಬಂದೊದಗಿದಂತಹ ದುಸ್ಥಿತಿ ಮತ್ತಾವ ದೇಶಸೇವಕರಿಗೂ ಬರದಿರಲಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share